Home Advertisement
Home ನಮ್ಮ ಜಿಲ್ಲೆ ಬಾಗಲಕೋಟೆ ಬಾಗಲಕೋಟೆ: ಕೃಷ್ಣಾ ನದಿಯಲ್ಲಿ ಮುಳುಗಿ ಬಾಲಕ ಸಾವು

ಬಾಗಲಕೋಟೆ: ಕೃಷ್ಣಾ ನದಿಯಲ್ಲಿ ಮುಳುಗಿ ಬಾಲಕ ಸಾವು

0
229

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಸಮೀಪದ ಕೃಷ್ಣಾ ನದಿ ಜಾಕ್‌ವೆಲ್ ಪ್ರದೇಶದಲ್ಲಿ ಭಾನುವಾರ ಸಂಭವಿಸಿದ ದುರ್ಘಟನೆಯಲ್ಲಿ 11 ವರ್ಷದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ದುಃಖಕರವಾಗಿದೆ. ಮೃತ ಬಾಲಕನನ್ನು ಹುಬ್ಬಳ್ಳಿಯ ರಾಹುಲ್ ಪ್ರಕಾಶ ಅಜ್ಜನವರ ಎಂದು ಗುರುತಿಸಲಾಗಿದೆ.

ಶಾಲಾ ರಜೆಯ ಹಿನ್ನೆಲೆ ಸಂಬಂಧಿಕರ ಮನೆಗೆ ರಬಕವಿಗೆ ಬಂದಿದ್ದ ರಾಹುಲ್, ಬೆಳಗಿನ ಜಾವ ಸಂಬಂಧಿಕರೊಂದಿಗೆ ನದಿ ತೀರಕ್ಕೆ ತೆರಳಿದ್ದನು. ಪ್ರತಿದಿನದಂತೆ ನೂರಾರು ಜನರು ಸ್ನಾನಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಗೊಂದಲದ ನಡುವೆ ಬಾಲಕ ನೀರಿಗೆ ಇಳಿದಿದ್ದಾನೆ. ಈಜು ಬಾರದ ಕಾರಣ ಕೆಲವೇ ಕ್ಷಣಗಳಲ್ಲಿ ಅವನು ನೀರಿನಲ್ಲಿ ಮುಳುಗಿದ್ದಾನೆ ಎಂದು ತಿಳಿದುಬಂದಿದೆ.

ಬಾಲಕ ಕಾಣೆಯಾಗಿರುವುದನ್ನು ಗಮನಿಸಿದ ಸಂಬಂಧಿಕರು ಹಾಗೂ ಸ್ಥಳೀಯರು ತಕ್ಷಣವೇ ಹುಡುಕಾಟ ನಡೆಸಿದರೂ ಯಶಸ್ಸು ಸಿಗಲಿಲ್ಲ. ಬಳಿಕ ಅಗ್ನಿಶಾಮಕ ದಳದ ತಂಡಕ್ಕೆ ಮಾಹಿತಿ ನೀಡಲಾಗಿದ್ದು, ಸಹಾಯಕ ಠಾಣಾಧಿಕಾರಿ ರಮೇಶ ಚಿವಟೆ ನೇತೃತ್ವದಲ್ಲಿ ಸಿಬ್ಬಂದಿ ರಾಹುಲ್‌ಗಾಗಿ ಶೋಧ ಕಾರ್ಯ ಆರಂಭಿಸಿದರು.

ತೀವ್ರ ಶೋಧ ಕಾರ್ಯದ ಬಳಿಕ ಬಾಲಕನನ್ನು ನೀರಿನಿಂದ ಹೊರತೆಗೆದು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಆತನನ್ನು ಮೃತಪಟ್ಟಿದ್ದಾಗಿ ಘೋಷಿಸಿದರು.

ಈ ಘಟನೆ ತೇರದಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಹಾಗೂ ಶೋಕದ ವಾತಾವರಣವನ್ನು ಮೂಡಿಸಿದೆ.