Home Advertisement
Home ಸುದ್ದಿ ರಾಜ್ಯ ನಾಳೆ ಮಧ್ಯಾಹ್ನ 3 ಗಂಟೆಗೆ ದ್ವಿತೀಯ ಪಿಯುಸಿ ಫಲಿತಾಂಶ; ಈ ಬಾರಿ ರಿಸಲ್ಟ್ ನಿಯಮ ಬದಲಾವಣೆ

ನಾಳೆ ಮಧ್ಯಾಹ್ನ 3 ಗಂಟೆಗೆ ದ್ವಿತೀಯ ಪಿಯುಸಿ ಫಲಿತಾಂಶ; ಈ ಬಾರಿ ರಿಸಲ್ಟ್ ನಿಯಮ ಬದಲಾವಣೆ

0
140

ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ ಕ್ಷಣ ಹತ್ತಿರ ಬಂದಿದೆ. ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ನಾಳೆ, ಅಂದರೆ ಏಪ್ರಿಲ್ 9ರಂದು ಅಧಿಕೃತವಾಗಿ ಪ್ರಕಟವಾಗಲಿದೆ. ಈ ಬಾರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ, ಫಲಿತಾಂಶ ಪ್ರಕಟಣೆಯ ಕ್ರಮದಲ್ಲಿ ಸಣ್ಣ ಬದಲಾವಣೆ ಮಾಡಲಾಗಿದ್ದು, ವಿದ್ಯಾರ್ಥಿಗಳು ಮಧ್ಯಾಹ್ನ 3 ಗಂಟೆಯಿಂದಲೇ ವೆಬ್‌ಸೈಟ್‌ನಲ್ಲಿ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.

ಈ ಹಿಂದೆ ಮೊದಲು ಸುದ್ದಿಗೋಷ್ಠಿ ನಡೆಸಿ ನಂತರ ಫಲಿತಾಂಶ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಮೊದಲು ವೆಬ್‌ಸೈಟ್‌ನಲ್ಲಿ ರಿಸಲ್ಟ್ ಅಪ್‌ಲೋಡ್ ಆದ ನಂತರ, ಸಂಜೆ 6:15ಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಪರೀಕ್ಷೆಯ ಸಾರಾಂಶವನ್ನು ಹಂಚಿಕೊಳ್ಳಲಿದ್ದಾರೆ. ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ https://karresults.nic.in ಗೆ ಭೇಟಿ ನೀಡಿ ಫಲಿತಾಂಶ ಚೆಕ್ ಮಾಡಬಹುದು. ಇದರೊಂದಿಗೆ ‘ಕರ್ನಾಟಕ ಒನ್’ ಮೊಬೈಲ್ ಆಪ್ ಮೂಲಕವೂ ಫಲಿತಾಂಶ ಲಭ್ಯವಿದ್ದು, ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗಳಿಗೆ ಎಸ್‌ಎಂಎಸ್ ಮತ್ತು ವಾಟ್ಸಾಪ್ ಮೂಲಕವೂ ಮಾಹಿತಿಯನ್ನು ರವಾನಿಸಲು ಇಲಾಖೆ ಸಜ್ಜಾಗಿದೆ.

ಈ ವರ್ಷದ ವಿಶೇಷವೆಂದರೆ, ಮೊದಲ ಬಾರಿಗೆ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಡಿಜಿ ಲಾಕರ್ (DigiLocker) ಮೂಲಕ ನೀಡಲಾಗುತ್ತಿದೆ. ನಾಳೆ ಮಧ್ಯಾಹ್ನ 3 ಗಂಟೆಯ ನಂತರ ವಿದ್ಯಾರ್ಥಿಗಳು https://www.digilocker.gov.in/ ವೆಬ್‌ಸೈಟ್ ಬಳಸಿ ತಮ್ಮ ಡಿಜಿಟಲ್ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ರಾಜ್ಯದ ಒಟ್ಟು 1,217 ಕೇಂದ್ರಗಳಲ್ಲಿ ಸುಮಾರು 7.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ನಾಳೆ ಸಂಜೆ 3 ಗಂಟೆಯ ನಂತರ ಆಯಾ ಕಾಲೇಜುಗಳಿಗೂ ಫಲಿತಾಂಶದ ಪಟ್ಟಿಯನ್ನು ರವಾನೆ ಮಾಡಲಾಗುವುದು ಎಂದು ಇಲಾಖೆ ತಿಳಿಸಿದೆ.