ಬೆಂಗಳೂರು: ಬೆಂಗಳೂರು ಉತ್ತರ ತಾಲೂಕಿನ ಜಾರಕಬಂಡೆ ಶ್ರೀಗಂಧದ ಕಾವಲ್ ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು, ವಾಯುಪಡೆಯ ವಶದಲ್ಲಿರುವ 444 ಎಕರೆ ಅರಣ್ಯ ಭೂಮಿಯನ್ನು ಮರು ವಶಕ್ಕೆ ಪಡೆಯಲು ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಲಿಖಿತ ಸೂಚನೆ ನೀಡಿದ್ದಾರೆ.
444 ಎಕರೆ ಅರಣ್ಯ ಭೂಮಿ ಮರುಸ್ವಾಧೀನಕ್ಕೆ ಕ್ರಮ : ಜಾರಕಬಂಡೆಯ ಶ್ರೀಗಂಧದ ಕಾವಲ್ ಪ್ರದೇಶದಲ್ಲಿರುವ ಈ ಭೂಮಿಯನ್ನು ಮೂಲತಃ ಭಾರತೀಯ ವಾಯುಪಡೆಗೆ ಮಂಜೂರು ಮಾಡಲಾಗಿತ್ತು. ಆದರೆ, ರಾಜ್ಯ ಸರ್ಕಾರವು 2017ರ ಅಕ್ಟೋಬರ್ 9ರಂದು ಈ ಮಂಜೂರಾತಿಯನ್ನು ರದ್ದುಪಡಿಸಿತ್ತು. ಆದರೂ, ಅಗತ್ಯ ನಿಯಮಾನುಸಾರ ಹೊಸ ಅನುಮತಿ ಪಡೆಯದೇ ಭೂಮಿಯನ್ನು ಬಳಸುತ್ತಿರುವುದು ಗಂಭೀರ ವಿಷಯವಾಗಿದ್ದು, ಇದೀಗ ಕರ್ನಾಟಕ ಅರಣ್ಯ ಕಾಯಿದೆ, 1963ರ ಸೆಕ್ಷನ್ 64ಎ ಅಡಿ ನೋಟಿಸ್ ಜಾರಿ ಮಾಡಿ ಭೂಮಿ ವಶಕ್ಕೆ ಪಡೆಯಲು ಕ್ರಮ ಆರಂಭಿಸಲಾಗಿದೆ.
“ವಾಯುಪಡೆಗೆ ಹಕ್ಕಿಲ್ಲ” – ಸ್ಪಷ್ಟನೆ : ಈ ಬಗ್ಗೆ ಸ್ಪಷ್ಟನೆ ನೀಡಿದ ಸಚಿವರು, “ಈ ಜಮೀನಿನ ಮೇಲೆ ವಾಯುಪಡೆಯಿಗೆ ಯಾವುದೇ ಹಕ್ಕು ಉಳಿದಿಲ್ಲ. ಮಂಜೂರಾತಿ ರದ್ದಾದ ನಂತರವೂ ಬಳಸುತ್ತಿರುವುದು ಕಾನೂನುಬಾಹಿರ” ಎಂದು ಹೇಳಿದ್ದಾರೆ.
ಪರಿಸರದ ದೃಷ್ಟಿಯಿಂದ ಮಹತ್ವದ ಪ್ರದೇಶ : ಈ ಪ್ರದೇಶವನ್ನು ಬೆಂಗಳೂರಿನ ಪ್ರಮುಖ “ಲಂಗ್ ಸ್ಪೇಸ್” (ಶ್ವಾಸತಾಣ) ಎಂದು ಪರಿಗಣಿಸಲಾಗಿದ್ದು, ಪರಿಸರ ಸಮತೋಲನ ಕಾಪಾಡಲು ಈ ಭೂಮಿಯನ್ನು ಅರಣ್ಯವಾಗಿ ಉಳಿಸುವುದು ಅಗತ್ಯ ಎಂದು ಸಚಿವರು ಒತ್ತಿ ಹೇಳಿದ್ದಾರೆ. ಯಾವುದೇ ವಿಳಂಬವಿಲ್ಲದೆ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಹೊಸ ನಿಯಮಗಳು – ಪರಿವೇಶ್ ಪೋರ್ಟಲ್ ಕಡ್ಡಾಯ: ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕಾದರೆ, ಅರಣ್ಯ (ಸಂರಕ್ಷಣಾ) ಕಾಯ್ದೆ-1980 ಅನ್ವಯ “ಪರಿವೇಶ್ ಪೋರ್ಟಲ್” ಮೂಲಕ ಕೇಂದ್ರ ಅನುಮತಿ ಪಡೆಯುವುದು ಕಡ್ಡಾಯ ಎಂದು ಎಲ್ಲಾ ಇಲಾಖೆಗಳಿಗೂ ಸೂಚಿಸಲಾಗಿದೆ.























