ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ (ಫುಟ್‌ಪಾತ್) ಒತ್ತುವರಿ ತೆರವು ಕಾರ್ಯಾಚರಣೆ ಗುರುವಾರವೂ ಮುಂದುವರಿದಿದೆ. ಸುಪ್ರೀಂಕೋರ್ಟ್ ನಿರ್ದೇಶನ ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಜೆಸಿಬಿ, ಟ್ರ್ಯಾಕ್ಟರ್‌ಗಳ ಸಹಾಯದಿಂದ ವ್ಯಾಪಕ ಕಾರ್ಯಾಚರಣೆ ನಡೆಸಿದರು.
ಜಿಬಿಎ ಜುಲೈ 1ರವರೆಗೆ ಪಾದಚಾರಿ ಮಾರ್ಗಗಳಲ್ಲಿನ ಒತ್ತುವರಿಯನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸಲು ಗಡುವು ನೀಡಿತ್ತು. ಗಡುವು ಮುಗಿದ ಬಳಿಕವೂ ತೆರವುಗೊಳಿಸದ ಹಿನ್ನೆಲೆಯಲ್ಲಿ ಅಧಿಕಾರಿಗಳು ವಿವಿಧ ಪ್ರದೇಶಗಳಲ್ಲಿ ಪೆಟ್ಟಿಗೆ ಅಂಗಡಿಗಳು, ತಳ್ಳುವ ಗಾಡಿಗಳು, ತಾತ್ಕಾಲಿಕ ಶೆಡ್‌ಗಳು, ಕ್ಯಾನೋಪಿಗಳು, ಜಾಹೀರಾತು ಫಲಕಗಳು, ಬ್ಯಾನರ್‌ಗಳು, ಫ್ಲೆಕ್ಸ್‌ಗಳು, ಒಎಫ್‌ಸಿ ಕೇಬಲ್‌ಗಳು, ಕಟ್ಟಡ ಸಾಮಗ್ರಿಗಳು ಹಾಗೂ ಇತರೆ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸಿದರು.
ಇದನ್ನೂ ಓದಿ: ಬೆಂಗಳೂರು: ಕಲ್ಲು ಕ್ವಾರಿ ದುರಂತ – ಬಂಡೆ ಕುಸಿದು 7 ಕಾರ್ಮಿಕರ ಸಾವು
ಈ ವೇಳೆ ಹಲವು ಕಡೆ ಬೀದಿ ಬದಿ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಿಬಿಎಂಪಿಯಿಂದ ಗುರುತಿನ ಚೀಟಿ ಪಡೆದು ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದೇವೆ. ಏಕಾಏಕಿ ತೆರವುಗೊಳಿಸಿದರೆ ನಮ್ಮ ಜೀವನೋಪಾಯಕ್ಕೆ ಸಂಕಷ್ಟ ಉಂಟಾಗುತ್ತದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡರು. ಕೆಲವೆಡೆ ಅಧಿಕಾರಿಗಳು ಹಾಗೂ ವ್ಯಾಪಾರಿಗಳ ನಡುವೆ ವಾಗ್ವಾದವೂ ನಡೆಯಿತು. ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಕಾರ್ಯಾಚರಣೆ ಕುರಿತು ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡ, ಸುಪ್ರೀಂಕೋರ್ಟ್ ಆದೇಶದಂತೆ ಒತ್ತುವರಿ ತೆರವು ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿಯಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು, ಅಪಘಾತಗಳೂ ಹೆಚ್ಚುತ್ತಿವೆ. ಆದ್ದರಿಂದ ಹೆಚ್ಚು ಜನ ಸಂಚರಿಸುವ ಪ್ರಮುಖ ರಸ್ತೆಗಳಲ್ಲಿ ಮೊದಲ ಹಂತದಲ್ಲಿ ಒತ್ತುವರಿ ತೆರವುಗೊಳಿಸಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಆರೋಪ: ಉಪನ್ಯಾಸಕನ ವಿರುದ್ಧ FIR
ಬೆಂಗಳೂರು ನಗರದಲ್ಲಿ ಸುಮಾರು 15 ಸಾವಿರ ಕಿಲೋಮೀಟರ್ ಪಾದಚಾರಿ ಮಾರ್ಗಗಳಿದ್ದು, ಮೊದಲ ಹಂತದಲ್ಲಿ ಸುಮಾರು 2 ಸಾವಿರ ಕಿಲೋಮೀಟರ್ (ಶೇ.20) ವ್ಯಾಪ್ತಿಯ ಪ್ರಮುಖ ಮಾರ್ಗಗಳನ್ನು ಒತ್ತುವರಿ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದರು.
ಅದೇ ವೇಳೆ, ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯಕ್ಕೂ ಸರ್ಕಾರ ಬದ್ಧವಾಗಿದೆ. ಆದ್ಯತೆಯ ರಸ್ತೆಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಪಾದಚಾರಿಗಳಿಗೆ ತೊಂದರೆಯಾಗದ ರೀತಿಯಲ್ಲಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಪಾದಚಾರಿ ಮಾರ್ಗಗಳು ಸಾರ್ವಜನಿಕರ ಹಕ್ಕಾಗಿದ್ದು, ಅವುಗಳನ್ನು ಒತ್ತುವರಿ ಮುಕ್ತವಾಗಿಡಲು ನಾಗರಿಕರು, ವ್ಯಾಪಾರಿಗಳು ಹಾಗೂ ವಾಣಿಜ್ಯ ಸಂಸ್ಥೆಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.






















