Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ಕಾಂಗ್ರೆಸ್ ಮುಖಂಡನ ಕೊಲೆ ಯತ್ನ: ಹಂತಕರ CCTV ವಿಡಿಯೋ ವೈರಲ್

ಕಾಂಗ್ರೆಸ್ ಮುಖಂಡನ ಕೊಲೆ ಯತ್ನ: ಹಂತಕರ CCTV ವಿಡಿಯೋ ವೈರಲ್

0
118

ಕಾರವಾರ: ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಅವರ ಮೇಲೆ ನಡೆದ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ‌ ವಶಕ್ಕೆ ಪಡೆದ ಶಂಕಿತ ಆರೋಪಿಗಳು ಟಾರ್ಗೆಟ್ ಮಿಸ್ ಆಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ ರಸ್ತೆಯಲ್ಲಿ ಸಾಗುತ್ತಿದ್ದ ಸಿಸಿ ಕ್ಯಾಮರಾ ದೃಶ್ಯವೊಂದರ ವಿಡಿಯೋ ವೈರಲ್ ಆಗಿದೆ.

ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಆಪ್ತರಾಗಿರುವ ಗೋಪಾಲಕೃಷ್ಣ ನಾಯಕ ಅವರು ನಿನ್ನೆ ಶೇವಿಂಗ್ ಮಾಡಿಸಿಕೊಳ್ಳಲು ಒಬ್ಬರೇ ತೆರಳುತ್ತಿದ್ದ ಸಂದರ್ಭದಲ್ಲಿ ಹಂತಕರು ಅಟ್ಯಾಕ್ ಮಾಡಿದ್ದಾರೆ. ಸದಾ ಬೆಂಬಲಿಗರು ಹಾಗೂ ಯುವಕರ ನಡುವೆ ಇರುತ್ತಿದ್ದ ನಾಯಕರು, ಒಬ್ಬಂಟಿಯಾಗಿದ್ದ ಸಮಯವನ್ನೇ ಕಾದು ಹಂತಕರು ದಾಳಿ ನಡೆಸಿದ್ದರು. ಆದರೆ, ತಕ್ಷಣ ಎಚ್ಚೆತ್ತುಕೊಂಡ ಗೋಪಾಲಕೃಷ್ಣ ಅವರು ಸಮೀಪದ ಬ್ಯಾಂಕ್ ಒಂದರ ಒಳಗೆ ಓಡಿ ಹೋಗುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಅವರು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೂರು ತಿಂಗಳಿನಿಂದ ನಡೆದಿದ್ದ ಸ್ಕೆಚ್! : ಈ ಕೊಲೆಗೆ ಕಳೆದ ಮೂರು ತಿಂಗಳಿನಿಂದ ಸಂಚು ರೂಪಿಸಲಾಗಿತ್ತು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಗೋವಾ ಮೂಲದ ಈ ಹಂತಕರು ಅಂಕೋಲಾದಲ್ಲಿಯೇ ಬಾಡಿಗೆಗೆ ಮನೆ ಮಾಡಿಕೊಂಡಿದ್ದರು. ನಾಯಕರ ಚಲನವಲನದ ಮೇಲೆ ನಿರಂತರ ನಿಗಾ ಇರಿಸಿ, ಸುಪಾರಿ ಪಡೆದು ಈ ಕೃತ್ಯಕ್ಕೆ ಕೈ ಹಾಕಿದ್ದರು ಎನ್ನಲಾಗಿದೆ. ರಾಜಕೀಯವಾಗಿ ಅವರು ಬೆಳೆಯುವುದನ್ನು ತಡೆಯಲು ಸ್ಥಳೀಯರೇ ಸುಪಾರಿ ನೀಡಿರುವ ಶಂಕೆ ವ್ಯಕ್ತವಾಗಿದೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು ಹಂತಕರ ದೃಶ್ಯ: ಅಂಕೋಲಾ ಪಟ್ಟಣದ ಪೂರ್ಣಪ್ರಜ್ಞಾ ಶಿಕ್ಷಣ ಸಂಸ್ಥೆಯ ರಸ್ತೆಯಲ್ಲಿ ಆರೋಪಿಗಳು ನಡೆದು ಹೋಗುತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಹತ್ಯೆ ಯತ್ನ ವಿಫಲವಾದ ನಂತರ ಆರೋಪಿಗಳು ಪರಾರಿಯಾಗುತ್ತಿದ್ದಾಗ, ಒಬ್ಬ ವ್ಯಕ್ತಿ ಮೊಬೈಲ್‌ನಲ್ಲಿ ಮಾತನಾಡುತ್ತಾ ಹಂತಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ದೃಶ್ಯವೂ ಲಭ್ಯವಾಗಿದೆ. “ಕೆಲಸ ಪೂರ್ತಿ ಮಾಡದೇ ಇದ್ದರೆ ನೀವ್ಯಾಕೆ ಇಲ್ಲಿಗೆ ಬಂದಿದ್ದೀರಿ? ಅರೆಬರೆ ಕೆಲಸ ಮಾಡಿ ಪರಾರಿಯಾಗುತ್ತಿದ್ದೀರಾ?” ಎಂದು ಆ ವ್ಯಕ್ತಿ ಕಿಡಿಕಾರುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಬಲೆಗೆ ಬಿದ್ದ ನಾಲ್ವರು ಆರೋಪಿಗಳು: ಕೃತ್ಯ ಎಸಗಿದ ಬಳಿಕ ಕಾರು ಬಿಟ್ಟು ಪರಾರಿಯಾಗಲು ಯತ್ನಿಸುತ್ತಿದ್ದ ಆರು ಜನ ಆರೋಪಿಗಳ ಪೈಕಿ ನಾಲ್ವರನ್ನು ಕಾರವಾರದ ಮಾಜಾಳಿ ಗಡಿಯ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಅವರಿಗಾಗಿ ಗೋವಾದಲ್ಲಿ ತಡರಾತ್ರಿ ಕಾರ್ಯಾಚರಣೆ ನಡೆಸಲಾಗಿದೆ.

ಬಿಗಿ ಪೊಲೀಸ್ ಬಂದೋಬಸ್ತ್: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪಶ್ಚಿಮ ವಲಯ ಐಜಿಪಿ ಅವರು ಕಾರವಾರದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ದೀಪನ್ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದ್ದು, ಸುಪಾರಿ ನೀಡಿದ ಅಸಲಿ ಮಾಸ್ಟರ್ ಮೈಂಡ್ ಯಾರು ಎಂಬುದು ಶೀಘ್ರವೇ ಬಯಲಾಗುವ ಸಾಧ್ಯತೆ ಇದೆ.