Home Advertisement
Home ನಮ್ಮ ಜಿಲ್ಲೆ ಧಾರವಾಡ ಉಪ್ಪಿನಬೆಟಗೇರಿಯಲ್ಲಿ ʻರೊಟ್ಟಿ ಜಾತ್ರೆʼ

ಉಪ್ಪಿನಬೆಟಗೇರಿಯಲ್ಲಿ ʻರೊಟ್ಟಿ ಜಾತ್ರೆʼ

0
39

ಸಿ.ವೈ.ಲಗಮಣ್ಣವರ
ಧಾರವಾಡ(ಉಪ್ಪಿನಬೆಟಗೇರಿ): ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿಯ ಶ್ರೀ ಗುರು ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವ ಅಕ್ಷರಶಃ ರೊಟ್ಟಿ ಜಾತ್ರೆಯಾಗಿ ಮಾರ್ಪಟ್ಟಿದೆ.

ಬುಟ್ಟಿ ಬುಟ್ಟಿ ಹೊತ್ತುಕೊಂಡು ತಾಯಂದಿರು ಮಠದ ಕಡೆಗೆ ಸಾಗುತ್ತಿರುವ ದೃಶ್ಯಗಳು ಗ್ರಾಮದಲ್ಲಿ ಸಾಮಾನ್ಯ ಎನ್ನುವಂತಿದೆ. ಈಗಾಗಲೇ ಮಠದಲ್ಲಿ ರಾಶಿ ರಾಶಿ ರೊಟ್ಟಿಗಳು ಸಂಗ್ರಹವಾಗಿದ್ದು, ಸೋಮವಾರದವರೆಗೂ ಮಹಿಳೆಯರು ರೊಟ್ಟಿ ತರಲಿದ್ದಾರೆ.

ಜಾತ್ರಾ ಮಹೋತ್ಸವದ ʻಲವಣಗಿರಿ ಉತ್ಸವ’ದ ಅಂಗವಾಗಿ 9 ದಿನಗಳವರೆಗೆ ಜರುಗಿದ ಶರಣರ ಜೀವನ ದರ್ಶನ ಪ್ರವಚನ ಶನಿವಾರ ಮಹಾಮಂಗಲವಾಗಿದ್ದು, ಸೋಮವಾರ ಶ್ರೀ ಗುರು ವಿರೂಪಾಕ್ಷೇಶ್ವರ ರಥೋತ್ಸವವು ವಿಜೃಂಭಣೆಯಿಂದ ನೆರವೇರಲಿದೆ.

ಜಾತ್ರಾ ಮಹೋತ್ಸವವನ್ನು ರೊಟ್ಟಿ ಜಾತ್ರೆಯನ್ನಾಗಿ ಮಾಡೋಣ ಎಂಬ ಹಿರಿಯರ ನಿರ್ಧಾರದಂತೆ ಪ್ರತಿ ಮನೆಯಿಂದ ಕೈಲಾದಷ್ಟು ರೊಟ್ಟಿಯನ್ನು ಬುಟ್ಟಿಯಲ್ಲಿ ಹೊತ್ತುಕೊಂಡು ಶ್ರೀಮಠಕ್ಕೆ ತಂದು ಮುಟ್ಟಿಸುವ ಮೂಲಕ ಮಹಿಳೆಯರು ಅಜ್ಜನ ಜಾತ್ರೆಗೆ ವಿಶೇಷ ಕಳೆ ತಂದಿದ್ದಾರೆ.

ಕಳೆದ ಒಂದು ವಾರದಿಂದ ಶ್ರೀಮಠದಲ್ಲಿ ರೊಟ್ಟಿ ಸಂಗ್ರಹಿಸಲಾಗುತ್ತಿದ್ದು, ಸೋಮವಾರದ ಹೊತ್ತಿಗೆ ಅಂದಾಜು ಹತ್ತು ಸಾವಿರಕ್ಕಿಂತಲೂ ಹೆಚ್ಚು ರೊಟ್ಟಿ ಸಂಗ್ರಹವಾಗಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿಯ ಉಸ್ತುವಾರಿಗಳು ತಿಳಿಸಿದ್ದಾರೆ.

ಸೋಮವಾರ ನಡೆಯಲಿರುವ ಅಜ್ಜನ ಜಾತ್ರೆಯ ಮಹಾಪ್ರಸಾದದಲ್ಲಿ ಜಾತ್ರಾ ಮಹೋತ್ಸವ ಸಮಿತಿಯವರ ಸಿಹಿ ಪ್ರಸಾದ ಮತ್ತು ಅನ್ನ ಪ್ರಸಾದದ ಜೊತೆಗೆ ಮಹಿಳೆಯರು ತಂದಿರುವ ಜೋಳದ ರೊಟ್ಟಿಯೊಂದಿಗೆ ಜುಣಕದ ಪಲ್ಲೆಯ ಪ್ರಸಾದ ಸಕಲ ಸದ್ಭಕ್ತರಿಗೆ ದೊರಕಲಿದೆ.

ಯುವಕರು ಮತ್ತು ತಾಯಂದಿರ ಈ ರೊಟ್ಟಿ ಜಾತ್ರೆಯ ಸಂಕಲ್ಪಕ್ಕೆ ಸಕಲ ಭಕ್ತಗಣ ಕೈಜೋಡಿಸಿದ್ದು, ಈ ಮೂಲಕ 12ನೇ ಶತಮಾನದ ಬಸವಾದಿ ಶಿವಶರಣರ ಕಲ್ಪನೆಯ ಪ್ರಸಾದ ಸೇವೆಯ ಆಶಯ ಇಲ್ಲಿನ ಭಕ್ತರು ಸಾಕಾರಗೊಳಿಸುತ್ತಿದ್ದಾರೆ ಎಂದು ಶ್ರೀಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದ್ದಾರೆ.