ಹಾವೇರಿ(ಶಿಗ್ಗಾವಿ): ಕೆರೆ ಅಭಿವೃದ್ಧಿ ಮಾಡುವುದರಿಂದ ರೈತರಿಗೆ ಅನುಕೂಲವಾಗುತ್ತದೆ. ರೈತರಿಗೆ ಒಳ್ಳೆಯದಾದರೆ ಸೃಷ್ಟಿಗೆ ಒಳ್ಳೆಯದಾಗುತ್ತದೆ. ಅದರಿಂದ ಸಮಾಜಕ್ಕೆ, ದೇಶಕ್ಕೆ, ಮನುಕುಲಕ್ಕೆ ಒಳ್ಳೆಯದಾಗುತ್ತದೆ. ದೊಡ್ಡ ಪರೋಪಕಾರಿ ಆಗುವ ವಿಧಾನದಲ್ಲಿ ನಾವೂ ಕಾರಣೀಕರ್ತರಾಗುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದರು.
ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ತಡಸ ಗ್ರಾಮದಲ್ಲಿ ಭಾರತ ಸೇವಾ ಸಂಸ್ಥೆ ಏರ್ಪಡಿಸಿದ ಕಂಚಗಾರಗಟ್ಟಿ ಕೆರೆ ಹೂಳೆತ್ತುವ ಕಾಮಗಾರಿಯ ಪ್ರಾರಂಭೋತ್ಸವವನ್ನು ಮಾಡಿ, ಮಾತನಾಡಿದರು. ಕೆರೆ ನಮ್ಮೆಲ್ಲರ ಆಸ್ತಿ. ಕೆರೆಯ ಬಗ್ಗೆ ನಮಗೆಲ್ಲರಿಗೂ ಬಹಳಷ್ಟು ಕಳಕಳಿ ಇರುವುದು ನಮ್ಮ ಕರ್ತವ್ಯ ನೀರು ಯಾರಿಗೆ ಸೇರಿದೆ. ನೀರು ಯಾವುದಾದರೂ ವ್ಯಕ್ತಿಗೆ ಸೇರಿದೆಯೋ, ಯಾವುದಾದರೂ ಗುಂಪಿಗೆ, ರಾಜ್ಯಕ್ಕೆ ದೇಶಕ್ಕೆ ಸೇರಿದೆಯೋ, ನೀರು ಸರ್ಕಾರಕ್ಕೆ ಸೇರಿದ್ದಲ್ಲ. ಒಂದು ರಾಜ್ಯ ಅಥವಾ ಕೇಂದ್ರಕ್ಕೆ ಸೇರಿದ್ದಲ್ಲ. ಇಡೀ ಸಮೂಹ ಸಮಾಜಕ್ಕೆ ಸೇರಿದ್ದು. ನೀರು ನಿಸರ್ಗದತ್ತ ಕೊಡುಗೆ, ನಿಸರ್ಗ ಸಮಸ್ತ ಸಮೂಹಕ್ಕೆ ತನ್ನ ಕಾಣಿಕೆ ಕೊಡುತ್ತದೆ. ಹೀಗಾಗಿ ನೀರಿನ ಬಗ್ಗೆ ಅಷ್ಟೇ ಕಳಕಳಿ ಇರಬೇಕು. ಹೇಗೆ ನಮ್ಮ ಮನೆ, ನಮ್ಮ ಹೊಲ ಅನ್ನುವ ಕಳಕಳಿ ಇದೆಯೋ ಅದೇ ರೀತಿ ನಮ್ಮ ಕೆರೆ ಅನ್ನುವ ಕಳಕಳಿ ಬರಬೇಕು. ಅದನ್ನು ಸ್ವಚ್ಛವಾಗಿ ಇಟ್ಟುಕೊಂಡು ಸದುಪಯೋಗ ಮಾಡಿಕೊಳ್ಳಬೇಕು. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಂಡರೆ ಎಲ್ಲ ಕರೆಗಳು ಉತ್ತಮ ರೀತಿಯಲ್ಲಿ ಇರುತ್ತವೆ. ಕಾಲಕಾಲಕ್ಕೆ ಹೂಳು ತುಂಬುತ್ತದೆ. ಅದನ್ನು ಕಾಲಕಾಲಕ್ಕೆ ತೆಗೆಯಬೇಕು. ಮನುಷ್ಯನಲ್ಲಿಯೂ ಕಾಲಕಾಲಕ್ಕೆ ಬೇಕಾದ, ಬೇಡಾದ ವಿಚಾರಗಳು ತುಂಬುತ್ತವೆ. ಅವುಗಳನ್ನು ತೆಗೆದು ಹಾಕಬೇಕು ಎಂದು ಹೇಳಿದರು.
ಪವಿತ್ರ ಕೆಲಸ: ಕೆರೆ ಹೂಳು ತೆಗೆಯುವುದು ಪವಿತ್ರ ಕೆಲಸ, ಕೆಲವು ಸರ್ಕಾರಗಳು ಆಸಕ್ತಿ ತೆಗೆದುಕೊಂಡು ಮಾಡುತ್ತವೆ. ನಾವು ಸರ್ಕಾರದಲ್ಲಿ ಇದ್ದಾಗ ನಮ್ಮ ನಾಯಕರಾಗಿರುವ ಯಡಿಯೂರಪ್ಪ ಅವರು ಎಲ್ಲ ಶಾಸಕರಿಗೂ ತಮ್ಮ ಕ್ಷೇತ್ರದಲ್ಲಿ ಐದು ಕೆರೆಗಳನ್ನು ಸ್ವಂತ ಖರ್ಚಿನಲ್ಲಿ ಹೂಳು ತೆಗೆಸಬೇಕು ಅಂತ ಹೇಳಿದರು. ನಾವು ಜನರ ಒತ್ತಾಸೆಯಿಂದ ಐದು ಕೆರೆ ಬದಲು ಐವತ್ತು ಕೆರೆ ಹೂಳು ತೆಗೆಸಿದೆವು. ಅದರಲ್ಲಿ ಬಹಳ ಜನರು ಸಹಾಯ ಮಾಡಿದರು. ಶ್ರೀಕಾಂತ ದುಂಡಿಗೌಡರು ತಮ್ಮ ಭಾರತ ಸೇವಾ ಸಂಸ್ಥೆ ವತಿಯಿಂದ ಹೂಳು ತೆಗೆಸಿದರು. ಪರೋಪಕಾರ ಮಾಡುವ ರುಚಿ ಹತ್ತಿದರೆ ಅದನ್ನು ಬಿಡಲು ಆಗುವುದಿಲ್ಲ. ಒಳ್ಳೆಯ ಕೆಲಸ ಮಾಡುವುದನ್ನು ಪ್ರಾರಂಭಿಸಿ, ಮುಂಜಾನೆ ಚಹಾ ಕುಡಿಯುವ ಮುಂಚೆ ಐದು ನಿಮಿಷ ಪ್ರಾರ್ಥನೆ ಮಾಡಿದರೆ ಅದು ಬಿಡಲು ಆಗುವುದಿಲ್ಲ. ಪರೋಪಕಾರಿಯಾಗಿ ಕೆಲಸ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಸ್ವಚ್ಛವಾಗಿ ನಮ್ಮ ಮನೆ, ಊರು ಇಟ್ಟುಕೊಳ್ಳುವುದು ಒಳ್ಳೆಯ ಗುಣ ಎಂದರು.
ಭಾರತ ಸೇವಾ ಸಂಸ್ಥೆ ಏಳೆಂಟು ವರ್ಷಗಳಿಂದ ಕೆರೆ ಹೂಳೆತ್ತುವ ಕೆಲಸ ಮಾಡಿದ್ದರು. ಮೂರು ವರ್ಷಗಳಿಂದ ಮಳೆಯಾಗಿದ್ದರಿಂದ ಹೂಳು ತೆಗೆಯಲು ಆಗಿರಲಿಲ್ಲ. ಒಳ್ಳೆಯ ಕೆಲಸ ಮಾಡಲು ರೂಢಿ ಮಾಡಿಕೊಂಡರೆ ಬದುಕಿನಲ್ಲಿ ಒಳ್ಳೆಯ ಸಾಧನೆ. ಯಶಸ್ಸು ಬದುಕಿನ ಒಂದು ಸಣ್ಣ ಭಾಗ. ಸಾಧನೆ ಬಹಳ ದೊಡ್ಡದು. ಯಶಸ್ಸು ಮತ್ತು ಸಾಧನೆಗೆ ಇರುವ ವ್ಯತ್ಯಾಸ, ಯಶಸು ನನ್ನ ಸ್ವಂತಕ್ಕಾಗಿ. ಸಾಧನೆ ನನ್ನ ಯಶಸ್ಸಿನ ಮೂಲಕ ಸಮಾಜಕ್ಕೆ ಬಡವರಿಗೆ ಸಹಾಯ ಮಾಡುವುದು ಅದೇ ಸಾಧನೆ. ಅದಕ್ಕೆ ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವುದು ಸಾಧಕ. ಅಂತಹ ಕೆಲಸ ನಾವು ಮಾಡಬೇಕು. ಕೆರೆ ಅಭಿವೃದ್ಧಿ ಮಾಡುವುದು ರೈತರಿಗೆ ಅನುಕೂಲವಾಗುತ್ತದೆ. ರೈತರಿಗೆ ಒಳ್ಳೆಯದಾದರೆ ಸೃಷ್ಟಿಗೆ ಒಳ್ಳೆಯದಾಗುತ್ತದೆ. ಅದರಿಂದ ಸಮಾಜಕ್ಕೆ ದೇಶಕ್ಕೆ ಒಳ್ಳೆಯದಾಗುತ್ತದೆ. ಅದರಿಂದ ಇಡೀ ಮನುಕುಲಕ್ಕೆ ಒಳ್ಳೆಯದಾಗುತ್ತದೆ. ದೊಡ್ಡ ಪರೋಪಕಾರಿ ಆಗುವ ವಿಧಾನದಲ್ಲಿ ನಾವೂ ಕಾರಣೀಕರ್ತರಾಗಬೇಕು ಇದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.
ವರದಾ ನದಿಯಿಂದ ನೀರು: ವರದಾ ನದಿಯಿಂದ ತಡಸ ಕೆರೆಗೆ ನೀರು ತುಂಬಿಸುವ ಕೆಲಸವನ್ನು ಮಾಡಿದ್ದೇವೆ. ಸವಣೂರಿನಲ್ಲಿ ಹಿರೇ ಬೆಂಡಿಗೇರಿವರೆಗೆ ಮಾಡಿದ್ದೇವೆ. ಇದರಿಂದ ನಮಗೆ ಇನ್ನಷ್ಟು ಒಳ್ಳೆಯ ಕೆಲಸ ಮಾಡುವ ಪ್ರೇರಣೆ ಆಗಿದೆ. ಹೂಳು ತೆಗೆಯುವುದರಿಂದ ಇನ್ನಷ್ಟು ನೀರು ಹಿಡಿದಿಡಲು ಅನುಕೂಲವಾಗುತ್ತದೆ. ಶಿಗ್ಗಾವಿ ಸವಣೂರಿನಲ್ಲಿ 500ಕ್ಕೂ ಹೆಚ್ಚು ಕೆರೆಗಳಿವೆ. 180 ಎಕರೆ ವಿಸ್ತಾರದ ಮೋತಿ ತಾಲಾಬ್ ತುಂಬಿಸುವಂತೆ ಜನರ ಬಹಳ ಬೇಡಿಕೆಯಾಗಿತ್ತು ಆ ಕೆಲಸ ಮಾಡಿರುವ ಸಂತೃಪ್ತಿ ಇದೆ. ಹುನಗುಂದ ಕೆರೆ ಪೂರ್ತಿ ಮಾಡಿದೆವು. ಸ್ವಂತ ಖರ್ಚಿನಲ್ಲಿ ರಸ್ತೆ ಮಾಡಿ ಕೆರೆ ಅಭಿವೃದ್ಧಿ ಮಾಡಿದ್ದೇವೆ. ಬೆಳಗಲಿ, ಗಂಜಿಗಟ್ಟಿ, ದುಂಡಸಿ, ಹೊಸೂರು, ಯತ್ನಳ್ಳಿ ಕರೆ ಹೂಳೆತ್ತುವ ಕೆಲಸ ಮಾಡಿದ್ದೇವೆ. ಒಳ್ಳೆಯ ಕೆಲಸಕ್ಕೆ ಎಲ್ಲರೂ ಸಹಕಾರಿ ಮಾಡಿ, ಈ ಕೆಲಸ ಇತರರಿಗೆ ಪ್ರೇರಣೆಯಾಗಲಿ, ಇದರಿಂದ ನಮ್ಮ ತಾಲೂಕು ಅಭಿವೃದ್ಧಿಯಾಗಲು ಅನುಕೂಲವಾಗುತ್ತದೆ. ಒಳ್ಳೆಯ ಕೆಲಸದಿಂದ ತಾಲೂಕು ಉಳಿಯುತ್ತದೆ. ಜನರು ಸಂತೋಷವಾಗಿರಬೇಕೆಂದರೆ ಶಾಶ್ವತ ಕೆಲಸ ಮಾಡಬೇಕು. ಶ್ರೀಕಾಂತ ಅವರು ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಅನ್ನುವಂತೆ ತಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ಶಿಗ್ಗಾವಿ ತಾಲೂಕಿನ ಜನರ ಸೇವೆಗೆ ಇಟ್ಟಿದ್ದಾರೆ. ಒಳ್ಳೆಯ ಕೆಲಸ ಮಾಡುವ ಸಮೂಹ ನಮ್ಮ ತಾಲೂಕಿನಲ್ಲಿ ಬಂದು ಇತರ ತಾಲೂಕುಗಳಿಗೆ ಮಾದರಿಯಾಗಲಿ. ನನ್ನ ಮೊದಲ ಪ್ರಾಶಸ್ತ್ಯ ರೈತ ನೂರು ಬೇರೆ ಕೆಲಸ ಇದ್ದರೂ ನಾನು ಇಂತಹ ಕೆಲಸಕ್ಕೆ ಯಾವಾಗಲೂ ಬರುತ್ತೇನೆ. ಈ ಕೆಲಸಕ್ಕೆ ಗಂಜಿಗಟ್ಟಿ ಪರಮಪೂಜ್ಯರ ಆಶೀರ್ವಾದ ಇರಲಿ ಎಂದರು.























