SK Home Ad
Home ನಮ್ಮ ಜಿಲ್ಲೆ ಹಾವೇರಿ ಬದುಕಿದ್ದವಳಿಗೆ ಡೆತ್ ಸರ್ಟಿಫಿಕೇಟ್: 18 ತಿಂಗಳಿಂದ ‘ಸತ್ತವಳ’ ಸಂಕಷ್ಟ!

ಬದುಕಿದ್ದವಳಿಗೆ ಡೆತ್ ಸರ್ಟಿಫಿಕೇಟ್: 18 ತಿಂಗಳಿಂದ ‘ಸತ್ತವಳ’ ಸಂಕಷ್ಟ!

0
368

ಹಾವೇರಿ(ಶಿಗ್ಗಾವಿ) : ಸರ್ಕಾರಿ ಕಚೇರಿಗಳ ಯಡವಟ್ಟಿನಿಂದ ಬಡ ಮಹಿಳೆಯ ಬದುಕೇ ಬೀದಿಗೆ ಬಿದ್ದಿದೆ. ಸತ್ತ ತಾಯಿಯ ಮರಣ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಮಗಳಿಗೇ, ಅಧಿಕಾರಿಗಳು ಜೀವಂತವಾಗಿದ್ದಾಗಲೇ ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಈಗ ಜೀವಂತ ಇದ್ದೀನಿ ಅಂತ ಸಾಬೀತುಪಡಿಸಲು ವೃದ್ಧೆ ಕಚೇರಿಗೆ ಅಲೆದಾಡಿ, ಹಾಸಿಗೆ ಹಿಡಿಯುವ ಪ್ರಸಂಗ ಬಂದಿದೆ.

ಶಿಗ್ಗಾವಿ ತಾಲೂಕಿನ ಅತ್ತಿಗೇರಿ ಗ್ರಾಮದ ನಿವಾಸಿ ಶಿವಗಂಗವ್ವ ತಳಳ್ಳಿ ಅವರೇ ಈ ಅವಸ್ಥೆ ಎದುರಿಸಬೇಕಾಗಿ ಬಂದಿದೆ. ಶಿವಗಂಗವ್ವ ಅವರ ತಾಯಿ ಶಂಕ್ರವ್ವ ಮಿಳ್ಳೆಯವರ ನಿಧನ ಹೊಂದಿದ ಬಳಿಕ ಅವರ ಮರಣ ಪ್ರಮಾಣ ಪತ್ರ ಪಡೆಯಲು ಕುಟುಂಬಸ್ಥರು ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯನ್ನು ಪರಿಶೀಲಿಸದೇ, ದಾಖಲೆಗಳನ್ನು ಸರಿಯಾಗಿ ನೋಡದೇ ತಾಯಿಯ ಬದಲು ಮಗಳ ಹೆಸರಿಗೆ ಮರಣ ಪ್ರಮಾಣ ಪತ್ರ ವಿತರಿಸಿರುವ ಅಧಿಕಾರಿಗಳ ಎಡವಟ್ಟು ಈಗ ಕುಟುಂಬದ ಬದುಕನ್ನೇ ಸಂಕಷ್ಟಕ್ಕೆ ತಳ್ಳಿದೆ.

ಒಮ್ಮೆ ಆನ್‌ಲೈನ್‌ನಲ್ಲಿ ಮರಣ ಹೊಂದಿದ್ದಾರೆ ಎಂಬ ಮಾಹಿತಿ ಅಪ್ಡೇಟ್ ಆದ ಬಳಿಕ, ಶಿವಗಂಗವ್ವ ಅವರ ಆಧಾರ್ ಕಾರ್ಡ್ ಅಮಾನ್ಯಗೊಂಡಿತು. ರೇಷನ್ ಕಾರ್ಡ್ ರದ್ದಾಯಿತು. ಗೃಹಲಕ್ಷ್ಮೀ ಯೋಜನೆಯ ಎರಡು ಸಾವಿರ ರೂಪಾಯಿ ಹಣ ನಿಂತು ಹೋಯಿತು. ಗಂಡನಿಗೆ ಬರುತ್ತಿದ್ದ ಹದಿನಾಲ್ಕು ಸಾವಿರ ರೂಪಾಯಿ ಪಿಂಚಣಿಗೂ ಕತ್ತರಿ ಬಿದ್ದಿದೆ. ಕಳೆದ 18 ತಿಂಗಳಿಂದ ಬದುಕಿದ್ದರೂ ಸತ್ತವಳಂತೆ ಸರ್ಕಾರದ ದಾಖಲೆಗಳಲ್ಲಿ ನಮೂದಾದ ಕಾರಣ ಕುಟುಂಬ ಇಂದು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿಗೆ ತಲುಪಿದೆ.

ಬ್ಯಾಂಕ್‌ಗೆ ಹಣ ತೆಗೆಯಲು ಹೋದಾಗಲೇ ಶಿವಗಂಗವ್ವ ಅವರಿಗೆ ಈ ಆಘಾತಕಾರಿ ಸತ್ಯ ಗೊತ್ತಾಗಿದೆ, ತಮ್ಮ ಹೆಸರಿನ ಮುಂದೆ ಮರಣ ಹೊಂದಿದ್ದಾರೆ ಎಂಬ ದಾಖಲೆಯನ್ನು ನೋಡಿ ಮಹಿಳೆ ಬೆಚ್ಚಿಬಿದ್ದಿದ್ದಾರೆ. ಬಳಿಕ ಕಚೇರಿ ಕಚೇರಿಗೆ ಅಲೆದಾಟ ತಪ್ಪಿಲ್ಲ. ಗ್ರಾಮದ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಅವಾಂತರಕ್ಕೆ ಪ್ರಮುಖ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಒಂದು ತಪ್ಪಾದ ಎಂಟ್ರಿ ಬಡ ಕುಟುಂಬದ ಜೀವನವನ್ನೇ ಹಾಳು ಮಾಡಿದೆ, ಬದುಕಿರುವ ಮಹಿಳೆಯನ್ನು ಸತ್ತವಳೆಂದು ಘೋಷಿಸಿ, ಸರ್ಕಾರದ ಎಲ್ಲ ಸೌಲಭ್ಯಗಳಿಂದ ವಂಚಿಸಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.