ಚಾಲಕನ ಜಾಗೃತೆಯಿಂದ 15ಕ್ಕೂ ಹೆಚ್ಚು ಪ್ರಯಾಣಿಕರು ಪಾರು: ದೇವರಗುಡ್ಡ ಬಳಿ ಘಟನೆ
ಹಾವೇರಿ (ಮೇ 05): ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ದೇವರಗುಡ್ಡ ಬಳಿ ಮಂಗಳವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಘಟನೆದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಆದರೆ ಚಾಲಕನ ಸಮಯೋಚಿತ ಕ್ರಮದಿಂದ 15ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನಿಂದ ಗದಗಿಗೆ ತೆರಳುತ್ತಿದ್ದ ಪಲ್ಲಕ್ಕಿ ಬಸ್ ರಾಣಿಬೆನ್ನೂರಿನಿಂದ ದೇವರಗುಡ್ಡ ಕಡೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಬಸ್ ಚಲಿಸುತ್ತಿರುವಾಗ ಬ್ರೇಕ್ ಲೈನರ್ ಚಕ್ರಕ್ಕೆ ತಿಕ್ಕಿ ತೀವ್ರ ಬಿಸಿ ಉಂಟಾಗಿ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಚಾಲಕ ತಕ್ಷಣವೇ ಬಸ್ ನಿಲ್ಲಿಸಿದ್ದಾರೆ.
ಪ್ರಯಾಣಿಕರನ್ನು ತಕ್ಷಣ ಕೆಳಗೆ ಇಳಿಸುವಷ್ಟರಲ್ಲಿ ಟೈರ್ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ಬೆಂಕಿ ಬಸ್‌ನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ. ಚಾಲಕ ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.
ಆದರೆ ಅಷ್ಟರೊಳಗೆ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ದೊಡ್ಡ ಪ್ರಮಾಣದ ಆಸ್ತಿ ನಷ್ಟ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.























