ಹುಬ್ಬಳ್ಳಿ: ಕಾರು ಮತ್ತು ಸ್ಕೂಟಿ ಮಧ್ಯೆ ಆ್ಯಕ್ಸನ್ ಬ್ರೇಕ್ ರೀಲ್ಸ್ ಮಾಡಲು ಹೋಗಿ, ಯುಗಾದಿ ಹಬ್ಬದ ಗುರುವಾರದಂದೆ 15 ವರ್ಷದ ಸ್ಕೂಟಿ ಸವಾರ ನಮೀಷ್ ಸಂಗಳದ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಮೃತಪಟ್ಟ ಬಾಲಕ ನಮೀಷ್ ಇಲ್ಲಿಯ ರವಿನಗರದ ನಿವಾಸಿಯಾಗಿದ್ದು, ಶೇಜವಾಡ್ಕರ್ ಲೇಔಟ್‌ನಲ್ಲಿ ಗುರುವಾರ ಘಟನೆ ನಡೆದಿದೆ. ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಆಡಿ ಕಾರ್ ಮತ್ತು ಎಲೆಕ್ಟ್ರಿಕಲ್ ಸ್ಕೂಟಿ ಎದುರು ಬದುರು ವೇಗವಾಗಿ ಬಂದು ತಕ್ಷಣ ಬ್ರೇಕ್ ಹಾಕುವ(ಆ್ಯಕ್ಸನ್ ಬ್ರೇಕ್ ರೀಲ್ಸ್) ವೇಳೆ, ನಿಯಂತ್ರಣ ತಪ್ಪಿ ಕಾರ್, ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಸ್ಕೂಟಿಯಲ್ಲಿದ್ದ ನಮೀಷ್ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ತಿಳಿಸಿದ್ದಾರೆ.
ಮೃತ ಬಾಲಕ ಬಿಜೆಪಿ ಮುಖಂಡ ವೀರೇಶ ಸಂಗಳದ ಅವರ ಪುತ್ರನಾಗಿದ್ದು, ಮೈಸೂರಿನಲ್ಲಿ ಓದುತ್ತಿದ್ದ. ಒಂಬತ್ತನೇ ತರಗತಿಯ ವಾರ್ಷಿಕ ಪರೀಕ್ಷೆ ಮುಗಿಸಿಕೊಂಡು ಯುಗಾದಿ ಹಬ್ಬಕ್ಕೆಂದು ಮನೆಗೆ ಬಂದಿದ್ದ. ಅಕ್ಕಪಕ್ಕದ ಸ್ನೇಹಿತರ ಜೊತೆ ಸೇರಿ ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ ಎಂದರು.
ಅಪ್ರಾಪ್ತರಿಗೆ ವಾಹನ ನೀಡಬೇಡಿ ಎಂದು ಪಾಲಕರಲ್ಲಿ ಜಾಗೃತಿ ಮೂಡಿಸುತ್ತಿದ್ದರೂ, ಅವರ ಗಮನಕ್ಕೆ ಬರದೆ ಕೆಲವು ಮಕ್ಕಳು ವಾಹನ ಚಲಾಯಿಸುತ್ತಿದ್ದಾರೆ. ಈ ಕುರಿತು ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.






















