Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ರಾಫ್ಟಿಂಗ್ ದರ ಏರಿಕೆ ವಿವಾದ: ಪ್ರವಾಸೋದ್ಯಮ ಭವಿಷ್ಯ ಪ್ರಶ್ನಾರ್ಥಕ

ರಾಫ್ಟಿಂಗ್ ದರ ಏರಿಕೆ ವಿವಾದ: ಪ್ರವಾಸೋದ್ಯಮ ಭವಿಷ್ಯ ಪ್ರಶ್ನಾರ್ಥಕ

0
372

ದಾಂಡೇಲಿ (ಉತ್ತರ ಕನ್ನಡ): ಜೋಯಿಡಾ ತಾಲೂಕಿನ ಗಣೇಶಗುಡಿ (ಇಳವಾ) ಪ್ರದೇಶದಲ್ಲಿ ರಾಫ್ಟಿಂಗ್ ಸೇರಿದಂತೆ ಜಲಕ್ರೀಡೆಗಳ ದರ ಏರಿಕೆ ವಿಚಾರ ಗಂಭೀರ ವಿವಾದಕ್ಕೆ ತಿರುಗಿದ್ದು, ಸ್ಥಳೀಯ ಪ್ರವಾಸೋದ್ಯಮದ ಭವಿಷ್ಯವೇ ಪ್ರಶ್ನಾರ್ಥಕವಾಗಿದೆ. ಜಟ್ಟಿ (ಬೋಟ್) ಮಾಲೀಕರು ಏಕಪಕ್ಷೀಯವಾಗಿ ದರ ಹೆಚ್ಚಳ ಮಾಡಿರುವುದಾಗಿ ಆರೋಪಿಸಿ, ರೆಸಾರ್ಟ್‌ಗಳು, ಹೋಂಸ್ಟೇಗಳು ಹಾಗೂ ಟ್ರಾವಲ್ ಏಜೆಂಟ್‌ಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿವೆ.

ದರ ಏರಿಕೆ ಬಗ್ಗೆ ಮಾತುಕತೆ ನಡೆಸಲು ಗಣೇಶಗುಡಿಯ ಇಳವಾದ ‘ಸಿಂಗಲ್ ಕೌಂಟರ್’ ವ್ಯವಸ್ಥೆಯಲ್ಲಿ ಸಭೆ ನಡೆದ ವೇಳೆ, ಎರಡು ಗುಂಪುಗಳ ನಡುವೆ ವಾಗ್ವಾದ ತೀವ್ರಗೊಂಡು ಕೈಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿದೆ. ಜಟ್ಟಿ ಮಾಲೀಕರ ಗುಂಪು ಹಾಗೂ ಪ್ರವಾಸೋದ್ಯಮ ಸಂಬಂಧಿತ ಉದ್ಯಮಿಗಳ ಗುಂಪಿನ ನಡುವೆ ನಡೆದ ಈ ಘರ್ಷಣೆ ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಿತು.

ಸ್ಥಳಕ್ಕೆ ತಕ್ಷಣ ಆಗಮಿಸಿದ ರಾಮನಗರ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದು, ಹೆಚ್ಚಿನ ಅನಾಹುತವನ್ನು ತಪ್ಪಿಸಿದರು.ಈ ಕುರಿತು ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, “ಬೂದಿ ಮುಚ್ಚಿದ ಕೆಂಡ”ದಂತಿರುವ ಈ ಉದ್ವಿಗ್ನ ಪರಿಸ್ಥಿತಿ ಮತ್ತೆ ಯಾವ ಕ್ಷಣದಲ್ಲಾದರೂ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.

ಪ್ರವಾಸೋದ್ಯಮಕ್ಕೆ ಭಾರೀ ಹೊಡೆತದ ಭೀತಿ: ಗಣೇಶಗುಡಿ ಮತ್ತು ದಾಂಡೇಲಿ ಪ್ರದೇಶಗಳು ರಾಫ್ಟಿಂಗ್, ಕಯಾಕಿಂಗ್, ಜಂಗಲ್ ಸಫಾರಿ ಸೇರಿದಂತೆ ಹಲವಾರು ಸಾಹಸ ಕ್ರೀಡೆಗಳಿಗಾಗಿ ದೇಶ-ವಿದೇಶದ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇಂತಹ ಸಮಯದಲ್ಲಿ ದರ ಏರಿಕೆ ಮತ್ತು ಸಂಘರ್ಷದ ಘಟನೆಗಳು ಪ್ರವಾಸಿಗರಲ್ಲಿ ಆತಂಕ ಮೂಡಿಸಿ, ದಾಂಡೇಲಿ ಪ್ರವಾಸೋದ್ಯಮಕ್ಕೆ ಕೆಟ್ಟ ಹೆಸರು ತರುವ ಸಾಧ್ಯತೆ ಇದೆ ಎಂದು ಉದ್ಯಮಿಗಳು ಎಚ್ಚರಿಸಿದ್ದಾರೆ.ಈಗಾಗಲೇ ಮಳೆಗಾಲದ ನಾಲ್ಕು ತಿಂಗಳು ಜಿಲ್ಲಾಡಳಿತದ ಆದೇಶದಂತೆ ಜಲಕ್ರೀಡೆಗಳು ಸ್ಥಗಿತಗೊಂಡಿತ್ತು. ನಂತರ ಪುನರಾರಂಭಗೊಂಡು ಚೇತರಿಕೆ ಕಾಣುತ್ತಿದ್ದಂತೆ ದರ ವಿವಾದ ಭುಗಿಲೆದ್ದಿದೆ.

ಆಡಳಿತದ ತ್ವರಿತ ಹಸ್ತಕ್ಷೇಪ ಅಗತ್ಯ: ಸ್ಥಿತಿ ಹದಗೆಡುವ ಮುನ್ನವೇ ಪ್ರವಾಸೋದ್ಯಮ ಇಲಾಖೆ, ಸ್ಥಳೀಯ ಆಡಳಿತ ಹಾಗೂ ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ದರ ನಿಗದಿ ಕುರಿತು ಸ್ಪಷ್ಟ ಮಾರ್ಗಸೂಚಿ ರೂಪಿಸಿ, ಎಲ್ಲಾ ಭಾಗಿದಾರರ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವ ಸಮತೋಲನ ಕ್ರಮ ಅಗತ್ಯವಾಗಿದೆ.

ಹೊಂದಾಣಿಕೆಯ ದಾರಿಯೇ ಪರಿಹಾರ: ಪ್ರವಾಸೋದ್ಯಮವು ದಾಂಡೇಲಿ ಭಾಗದ ಆರ್ಥಿಕ ಜೀವನಾಡಿಯಾಗಿದ್ದು, ಜಟ್ಟಿ ಮಾಲೀಕರು, ರೆಸಾರ್ಟ್‌ಗಳು, ಹೋಂ ಸ್ಟೇಗಳು ಮತ್ತು ಟ್ರಾವಲ್ ಏಜೆಂಟ್‌ಗಳ ನಡುವೆ ಸಮನ್ವಯ ಹಾಗೂ ಪರಸ್ಪರ ಗೌರವವೇ ಈ ಕ್ಷೇತ್ರದ ಬೆಳವಣಿಗೆಗೆ ಪ್ರಮುಖವಾಗಿದೆ. ಸಂಘರ್ಷಗಳ ಬದಲು ಸಂವಾದದ ಮೂಲಕ ಸಮಸ್ಯೆ ಪರಿಹರಿಸುವುದು ಎಲ್ಲರಿಗೂ ಲಾಭದಾಯಕ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಒಟ್ಟಾರೆ, ಗಣೇಶಗುಡಿಯ ದರ ವಿವಾದ ಕೇವಲ ಸ್ಥಳೀಯ ಮಟ್ಟದ ಸಮಸ್ಯೆಯಾಗಿರದೆ, ದಾಂಡೇಲಿ ಪ್ರವಾಸೋದ್ಯಮದ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಘಟ್ಟವಾಗಿದೆ. ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಈ ‘ಬೂದಿ ಮುಚ್ಚಿದ ಕೆಂಡ’ ಮತ್ತೊಮ್ಮೆ ಭುಗಿಲೆದ್ದು, ಪ್ರವಾಸೋದ್ಯಮ ಕ್ಷೇತ್ರಕ್ಕೆ ಹಾನಿ ಉಂಟುಮಾಡುವ ಸಾಧ್ಯತೆ ಇದೆ.