ಚೆನ್ನೈ: ತಮಿಳುನಾಡು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಮಹತ್ವದ ಮಧ್ಯಂತರ ಆದೇಶ ನೀಡಿದೆ. ಪೊಲೀಸರ ವಿಚಾರಣೆಗೆ ಸಂಪೂರ್ಣ ಸಹಕರಿಸುವಂತೆ ಸೂಚಿಸಿರುವ ನ್ಯಾಯಾಲಯ, ವಿಚಾರಣೆ ಪೂರ್ಣಗೊಂಡ ತಕ್ಷಣವೇ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.
ತಮಿಳುನಾಡು ಮುಖ್ಯಮಂತ್ರಿ ವಿಜಯ್ ಹಾಗೂ ನಟಿ ತ್ರಿಷಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಉದಯನಿಧಿ ಸ್ಟಾಲಿನ್ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳಲ್ಲಿ ಬಂಧನದ ಭೀತಿಯಿಂದ ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ವೇಳೆ, ಉದಯನಿಧಿ ಅವರನ್ನು ಈಗಾಗಲೇ ಬಂಧಿಸಲಾಗಿದ್ದು, ವಿಚಾರಣೆಗಾಗಿ ತಂಜಾವೂರಿಗೆ ಕರೆದೊಯ್ಯಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ವಿಚಾರಣೆ ಪೂರ್ಣಗೊಂಡ ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ತಿಳಿಸಿದ ಅವರು, ಪೊಲೀಸರ ತನಿಖೆಗೆ ಸಹಕರಿಸುವಂತೆ ಉದಯನಿಧಿಗೆ ಸೂಚನೆ ನೀಡುವಂತೆ ನ್ಯಾಯಾಲಯವನ್ನು ಕೋರಿದರು.
ಈ ವಾದಗಳನ್ನು ಪರಿಗಣಿಸಿದ ನ್ಯಾಯಾಲಯ, ಆರೋಪಿಯನ್ನು ಈಗಾಗಲೇ ಬಂಧಿಸಿರುವ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ತಾಂತ್ರಿಕವಾಗಿ ಮುಂದುವರಿಸಲು ಅವಕಾಶವಿಲ್ಲ ಎಂದು ಹೇಳಿತು. ಆದರೆ ಪ್ರಕರಣದ ಸನ್ನಿವೇಶವನ್ನು ಗಮನಿಸಿ, ವಿಚಾರಣೆ ಬಳಿಕ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿತು.
ಸೋಮವಾರ ತಂಜಾವೂರಿನಲ್ಲಿ ನಡೆದ ಕಾವೇರಿ ಸಂಬಂಧಿತ ಪ್ರತಿಭಟನೆಯ ವೇಳೆ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣಗಳ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ನೀಲಂಕರೈನಲ್ಲಿರುವ ಅವರ ನಿವಾಸಕ್ಕೆ ತಂಜಾವೂರು ಹಾಗೂ ನೀಲಂಕರೈ ಪೊಲೀಸರ ಜಂಟಿ ತಂಡ ಭೇಟಿ ನೀಡಿ ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಿತ್ತು.
ಉದಯನಿಧಿ ಬಂಧನದ ಸುದ್ದಿ ಹೊರಬಿದ್ದ ಬೆನ್ನಲ್ಲೇ ರಾಜ್ಯದ ಹಲವು ಭಾಗಗಳಲ್ಲಿ ಡಿಎಂಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ತಂಜಾವೂರಿನಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.



















