Home Advertisement
Home ನಮ್ಮ ಜಿಲ್ಲೆ ಧಾರವಾಡ ಕಾಳಸಂತೆಯಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್ ಮಾರಾಟ

ಕಾಳಸಂತೆಯಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್ ಮಾರಾಟ

0
20

ಹುಬ್ಬಳ್ಳಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಅದನ್ನೇ ಬಂಡವಾಳ ಮಾಡಿಕೊಂಡಿರುವ ಖದೀಮರು ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳನ್ನೇ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ಈವರೆಗೆ 677 ಸಿಲಿಂಡರ್‌ಗಳನ್ನು ಸೀಜ್ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಜ್ಯ ಸರ್ಕಾರ ಎಸ್ಮಾ ಕಾಯ್ದೆ ಜಾರಿಮಾಡಿದ ಬೆನ್ನಲ್ಲೇ ಗೃಹ ಬಳಕೆ ಗ್ಯಾಸ್ ಸಿಲಿಂಡರ್‌ಗಳನ್ನು ಕೇವಲ ಗ್ರಾಹಕರಿಗೆ ನೀಡಬೇಕು ಅದೂ ಬಿಲ್ ಸಮೇತ ಎಂದು ಆದೇಶ ಹೊರಡಿಸಿದೆ. ಇದಕ್ಕೂ ಅಡ್ಡದಾರಿ ಹುಡುಕಿಕೊಂಡಿದ್ದರಿಂದ ಜಿಲ್ಲಾವಾರು ಆಹಾರ ಇಲಾಖೆಯ ಅಧಿಕಾರಿಗಳು ತಂಡ ಕಟ್ಟಿಕೊಂಡು ತಪಾಸಣೆ ಆರಂಭಿಸಿದ್ದಾರೆ. ಈ ವೇಳೆ ಕೆಲ ಹೋಟೆಲ್‌ಗಳು ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳನ್ನು ರಾಜಾರೋಷವಾಗಿ ಬಳಸುತ್ತಿರುವುದು ಬೆಳಕಿಗೆ ಬಂದಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಜಪ್ತಿ?: ಬಾಗಲಕೋಟೆ ಜಿಲೆಯಲ್ಲಿ 44, ಬೆಂಗಳೂರು ದಕ್ಷಿಣ 11, ಬೆಂಗಳೂರು ಉತ್ತರ 3, ಬೆಂಗಳೂರು ಪಶ್ಚಿಮ 4, ಬೆಂಗಳೂರು ಶಹರ 284, ಬೆಂಗಳೂರು ಗ್ರಾಮೀಣ 115, ಬೆಳಗಾವಿ ಜಿಲ್ಲೆಯಲ್ಲಿ 17, ಬೀದರ್ 105, ಚಿಕ್ಕಬಳ್ಳಾಪುರ 30, ಚಿಕ್ಕಮಗಳೂರು 3, ಚಿತ್ರದುರ್ಗ 12, ಧಾರವಾಡ 27 ಹಾಗೂ ದಾವಣಗೆರೆ ಜಿಲ್ಲೆಯ 33 ಕಡೆಗಳಲ್ಲಿ ದಾಳಿ ನಡೆಸಿ ಹೋಟೆಲ್‌ಗಳಲ್ಲಿ ಅಕ್ರಮವಾಗಿ ಬಳಸುತ್ತಿದ್ದ ಮತ್ತು ದಾಸ್ತಾನು ಇಡಲಾಗಿದ್ದ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳನ್ನು ವಶಕ್ಕೆ ಪಡೆದು, ಹೋಟೆಲ್ ಮಾಲೀಕರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ನಮ್ಮ ವಿಜಿಲೆನ್ಸ್ ತಂಡ ಕೂಡ ಪ್ರತೀ ಹೋಟೆಲ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಅಕ್ರಮವಾಗಿ ಸಂಗ್ರಹಿಸಿಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡುಬಂದರೆ ಅಂತಹ ಏಜೆನ್ಸಿಗಳನ್ನು ಬಂದ್ ಮಾಡಿಸಲಾಗುವುದು ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕರಾದ ವಿನೋದಕುಮಾರ ಹೆಗ್ಗಳಗಿ ತಿಳಿಸಿದ್ದಾರೆ.