Home Advertisement
Home ಸಿನಿ ಮಿಲ್ಸ್ ಖಾಸಗಿ ಸಂಭಾಷಣೆ ವೈರಲ್‌ ಬೆನ್ನಲ್ಲೇ ರಶ್ಮಿಕಾ ಖಡಕ್‌ ವಾರ್ನಿಂಗ್

ಖಾಸಗಿ ಸಂಭಾಷಣೆ ವೈರಲ್‌ ಬೆನ್ನಲ್ಲೇ ರಶ್ಮಿಕಾ ಖಡಕ್‌ ವಾರ್ನಿಂಗ್

0
47

ಬೆಂಗಳೂರು: ಈಚೆಗೆ ತೆಲುಗು ನಟ ವಿಜಯ ದೇವರಕೊಂಡ ಜತೆ ಸಪ್ತಪದಿ ತುಳಿದು ಹನಿಮೂನ್‌ ಮೂಡನಲ್ಲಿರುವ ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣಲ್ಲಿ ಸಿಡಿದೆದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಒಂದೆರಡು ದಿನಗಳಿಂದ ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್ ಮಂದಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಆಡಿಯೋ ವೈರಲ್ ಆಗಿತ್ತು. ಈ ಕುರಿತು ರಶ್ಮಿಕಾ ಅವರಿಗೆ ನಕಾರಾತ್ಮಕವಾಗಿ ವಿಷಯ ಹಂಚಲಾಗಿದೆ ಎನ್ನುವುದು ನಟಿ ರಶ್ಮಿಕಾ ಗಮನಕ್ಕೆ ಬಂದಿದ್ದು, ಇದರಿಂದ ಸಿಡಿದೆದ್ದಿರುವ ಅವರು ಸುದೀರ್ಘ ಬರಹದ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಎಂಟು ವರ್ಷಗಳಿಂದ ನನ್ನ ವಿರುದ್ಧ ತಪ್ಪುಮಾಹಿತಿ, ಕಿರುಕುಳ ಮತ್ತು ವೈಯಕ್ತಿಕ ದಾಳಿಗಳು ನಡೆಯುತ್ತಿವೆ. ಇತ್ತೀಚೆಗೆ ಸುಮಾರು ಎಂಟು ವರ್ಷಗಳ ಹಿಂದಿನ ಖಾಸಗಿ ಸಂಭಾಷಣೆಯ ಒಂದು ಭಾಗವನ್ನು ಅನುಮತಿಯಿಲ್ಲದೆ ದಾಖಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗಿದೆ ಎಂದು ಅವರು ರಶ್ಮಿಕಾ ಮಂದಣ್ಣ ಆರೋಪಿಸಿದ್ದಾರೆ.

ಈ ಸಂಭಾಷಣೆಯ ಒಂದು ಸಣ್ಣ ಭಾಗವನ್ನು ಸಂದರ್ಭದಿಂದ ಬೇರ್ಪಡಿಸಿ ತಪ್ಪಾಗಿ ವ್ಯಾಖ್ಯಾನಿಸಿ ಹೊಸ ವಿವಾದ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ರಶ್ಮಿಕಾ ಹೇಳಿದ್ದಾರೆ. ಈ ಘಟನೆಯಿಂದ ತಮ್ಮ ಕುಟುಂಬದವರು ಹಾಗೂ ತಮ್ಮೊಂದಿಗೆ ಸ್ನೇಹಪೂರ್ವಕ ಸಂಬಂಧ ಹೊಂದಿರುವ ಕೆಲವು ವ್ಯಕ್ತಿಗಳನ್ನು ಅನಗತ್ಯವಾಗಿ ವಿವಾದಕ್ಕೆ ಎಳೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದು ವೈಯಕ್ತಿಕ ಗೌಪ್ಯತೆಯ ಗಂಭೀರ ಉಲ್ಲಂಘನೆಯಾಗಿದ್ದು, ತಪ್ಪು ಹಾಗೂ ಅವಹೇಳನಕಾರಿ ಮಾಹಿತಿಯನ್ನು ಹರಡುವ ಕೃತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಎಂಟು ವರ್ಷಗಳಿಂದ ತಮ್ಮ ವಿರುದ್ಧ ಮಾತ್ರ ದಾಳಿಗಳು ನಡೆದಾಗ ಮೌನವಾಗಿದ್ದೆ. ಆದರೆ ಈಗ ಇತರರನ್ನು ಕೂಡ ಈ ವಿಚಾರದಲ್ಲಿ ಎಳೆಯಲಾಗುತ್ತಿರುವುದರಿಂದ ಮೌನವಾಗಿರಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ವಿಡಿಯೊಗಳು ಹಾಗೂ ವಿಷಯಗಳನ್ನು ಹರಡುತ್ತಿರುವ ಎಲ್ಲಾ ಮಾಧ್ಯಮ ಸಂಸ್ಥೆಗಳು ಮತ್ತು ವ್ಯಕ್ತಿಗಳು ತಕ್ಷಣವೇ ಅವನ್ನು ತೆಗೆದುಹಾಕುವಂತೆ ಅವರು ಮನವಿ ಮಾಡಿದ್ದಾರೆ. ಈ ಪ್ರಕಟಣೆಯಿಂದ 24 ಗಂಟೆಗಳ ಒಳಗೆ ವಿಷಯವನ್ನು ತೆಗೆದುಹಾಕದಿದ್ದಲ್ಲಿ ಸಂಬಂಧಿಸಿದ ವ್ಯಕ್ತಿಗಳು, ಡಿಜಿಟಲ್ ವೇದಿಕೆಗಳು ಮತ್ತು ಮಾಧ್ಯಮ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಈ ಕ್ರಮವನ್ನು ಸುಲಭವಾಗಿ ತೆಗೆದುಕೊಳ್ಳಲಾಗಿಲ್ಲ. ಆದರೆ ತಮ್ಮ ಗೌರವ ಮತ್ತು ವೈಯಕ್ತಿಕ ಶಾಂತಿಯನ್ನು ಕಾಪಾಡಲು ಇದು ಅಗತ್ಯವಾಗಿದೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ಕೊನೆಯಲ್ಲಿ ಕನ್ನಡದಲ್ಲಿ ಬರೆದಿರುವ ರಶ್ಮಿಕಾ, “ಇಲ್ಲಿ ತನಕ ನನಗೆ ತುಂಬಾ ಜನ ಪ್ರೀತಿಯಿಂದ ಸಪೋರ್ಟ್ ಮಾಡಿದ್ದೀರ. ಅವರೆಗೂ ತುಂಬು ಹೃದಯದ ಧನ್ಯವಾದಗಳು. ಒಂದ್ ಮಾತು ಈ ಸಮಯದಲ್ಲಿ ಹೇಳಲೇಬೇಕು ಅನ್ಸಿದೆ -ಬೇಕಂತ ನಮ್ಮ ಖಾಸಗಿ ಜೀವನದ ಬಗ್ಗೆ ಬೈಕೊಂಡ್ ಮಾತ್ನಾಡೋ ಜನ, ಒಂದ್ ಅರ್ಥ ಮಾಡ್ಕೊಬೇಕು – ಅವರೆಲ್ಲ ನನ್ನ ಜೀವನ ಹೇಗಿರಬೇಕು ಅಂತ ನಿರ್ಧಾರ ಮಾಡಕ್ಕಾಗತ್ತಾ? ನಮ್ ಜೀವನ ನಮ್ದಲ್ವಾ? ನಮ್ ನಿರ್ಧಾರ ನಾವೇ ತೊಗೋಬೇಕು ಮತ್ತೆ ತೊಗೋತೀವಿ ಕೂಡ.” ಎಂದು ಬರೆದುಕೊಂಡಿದ್ದಾರೆ.