SK Home Ad
Home ಸಿನಿ ಮಿಲ್ಸ್ ತುಳುನಾಡಿನ ಹಾಸ್ಯ ದಿಗ್ಗಜರ ಸಂಗಮ: ‘ಪಿಚ್ಚರ್’ ಟ್ರೇಲರ್ ಬಿಡುಗಡೆ!

ತುಳುನಾಡಿನ ಹಾಸ್ಯ ದಿಗ್ಗಜರ ಸಂಗಮ: ‘ಪಿಚ್ಚರ್’ ಟ್ರೇಲರ್ ಬಿಡುಗಡೆ!

0
48

ಆಗಸ್ಟ್ 7ಕ್ಕೆ ‘ಪಿಚ್ಚರ್’ ತೆರೆಗೆ ಇಂದು ಟ್ರೇಲರ್ ಬಿಡುಗಡೆ : ನಗುವಿನ ಜೊತೆಗೆ ಆಕ್ಷನ್ ಮಸಾಲೆಗೆ ಭರ್ಜರಿ ಪ್ರತಿಕ್ರಿಯೆ

ಬೆಂಗಳೂರು : ಗೋಲ್ಡನ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಬಹು ನಿರೀಕ್ಷಿತ ತುಳು-ಕನ್ನಡ ದ್ವಿಭಾಷಾ ಸಿನಿಮಾ ‘ಪಿಚ್ಚರ್’ (Picture) ಆಗಸ್ಟ್ 7ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸೆಟ್ಟೇರಿದ ದಿನದಿಂದಲೇ ಸಿನಿಪ್ರಿಯರ ಗಮನ ಸೆಳೆದಿದ್ದ ಈ ಚಿತ್ರ ಇದೀಗ ಟ್ರೇಲರ್ ಬಿಡುಗಡೆ ಮೂಲಕ ಮತ್ತಷ್ಟು ಕುತೂಹಲ ಹುಟ್ಟಿಸಿದೆ.

ಸಂದೀಪ್ ಬೆದ್ರ ನಿರ್ದೇಶನದ ಈ ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕನಾಗಿ ನಿತ್ಯಪ್ರಕಾಶ್ ಬಂಟ್ವಾಳ್ ಕಾಣಿಸಿಕೊಂಡಿದ್ದು, ಅವರ ಅಭಿನಯ ಟ್ರೇಲರ್‌ನಲ್ಲಿ ಗಮನ ಸೆಳೆಯುತ್ತಿದೆ. ನಾಯಕಿಯಾಗಿ ಅಮೃತಾ ಸುದು ಅಭಿನಯಿಸಿದ್ದು, ತಮ್ಮ ಮುದ್ದಾದ ಲುಕ್ ಹಾಗೂ ಸಹಜ ಅಭಿನಯದಿಂದ ಪ್ರೇಕ್ಷಕರ ಮನ ಗೆಲ್ಲುವ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ‘ಪಾರ್ಟ್ನರ್’ಗಾಗಿ ಒಂದಾದ ಅಜೇಯ್ ರಾವ್ – ಕುನಾಲ್ ಗಾಂಜಾವಾಲ

ಸಿನಿಮಾ ಕಥೆಯೊಂದಿಗೆ ಆರಂಭವಾಗುವ ಟ್ರೇಲರ್ : ‘ಪಿಚ್ಚರ್’ ಟ್ರೇಲರ್ ಸಿನಿಮಾ ಮಾಡುವ ಚರ್ಚೆಯೊಂದಿಗೆ ಆರಂಭವಾಗುತ್ತದೆ. ಬಳಿಕ ಕುಟುಂಬದ ಸುತ್ತ ನಡೆಯುವ ಘಟನೆಗಳು, ಹಾಸ್ಯ, ಭಾವನಾತ್ಮಕ ಕ್ಷಣಗಳು, ಆಕ್ಷನ್ ಹಾಗೂ ಫ್ಲ್ಯಾಶ್‌ಬ್ಯಾಕ್ ದೃಶ್ಯಗಳು ಒಂದರ ಹಿಂದೆ ಒಂದರಂತೆ ಮೂಡಿ ಬರುತ್ತವೆ.

ಟ್ರೇಲರ್ ನೋಡಿದರೆ ಇದು ಸಂಪೂರ್ಣ ಕುಟುಂಬ ಸಮೇತ ನೋಡಬಹುದಾದ ಮನರಂಜನಾ ಚಿತ್ರ ಎಂಬುದು ಸ್ಪಷ್ಟವಾಗುತ್ತದೆ. ಕುಟುಂಬದ ಸಂಬಂಧಗಳು, ಕನಸುಗಳು ಮತ್ತು ಮನರಂಜನೆಯನ್ನು ಒಟ್ಟಿಗೆ ಬೆರೆಸಿ ನಿರ್ದೇಶಕ ಸಂದೀಪ್ ಬೆದ್ರ ಕಥೆಯನ್ನು ಕಟ್ಟಿಕೊಟ್ಟಿರುವ ಸುಳಿವು ಟ್ರೇಲರ್ ನೀಡುತ್ತದೆ.

ಇದನ್ನೂ ಓದಿ: ಗ್ಯಾಂಗ್‌ಸ್ಟರ್‌ to ರಾವಣ: ಯಶ್ 2 ಬೃಹತ್ ಚಿತ್ರಗಳಿಗೆ ಕೌಂಟ್‌ಡೌನ್

ತುಳುನಾಡಿನ ಕಾಮಿಡಿ ತಾರೆಯರ ಸಂಗಮ : ಚಿತ್ರದ ಪ್ರಮುಖ ಆಕರ್ಷಣೆ ಎಂದರೆ ತುಳು ಚಿತ್ರರಂಗದ ಖ್ಯಾತ ಹಾಸ್ಯ ಕಲಾವಿದರ ದಂಡು. ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್ ಸೇರಿದಂತೆ ತುಳುನಾಡಿನ ಜನಪ್ರಿಯ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದರ ಜೊತೆಗೆ ‘ಸು ಪ್ರಮ್ ಸೋ’ ಚಿತ್ರದ “ಬಾವ” ಪಾತ್ರದ ಮೂಲಕ ಜನಪ್ರಿಯತೆ ಪಡೆದ ಪುಷ್ಪರಾಜ್ ಬೊಳ್ಳಾರ್ ಈ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದು, ಅವರ ಪಾತ್ರವೂ ವಿಶೇಷ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಕಿಚ್ಚ ಸುದೀಪ್ ಫ್ಯಾಂಟಸಿ ಚಿತ್ರದ ‘ಬಿಲ್ಲ ರಂಗ ಬಾಷಾ’ ಝಲಕ್ ವೈರಲ್

ಗಣೇಶ್ ಅವರಿಂದ ಮತ್ತೊಂದು ಫ್ಯಾಮಿಲಿ ಎಂಟರ್‌ಟೈನರ್ : ಚಿತ್ರವನ್ನು ಗೋಲ್ಡನ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಶಿಲ್ಪಾ ಗಣೇಶ್ ನಿರ್ಮಿಸಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರವನ್ನು ಅರ್ಪಿಸಿದ್ದಾರೆ. ಗಣೇಶ್ ಅವರ ಸಿನಿಮಾಗಳಲ್ಲಿ ಕಂಡುಬರುವ ಕುಟುಂಬ ಮನರಂಜನೆಯ ಸೊಗಡನ್ನು ‘ಪಿಚ್ಚರ್’ ಮೂಲಕ ತುಳು ಚಿತ್ರರಂಗಕ್ಕೂ ತರುವ ಪ್ರಯತ್ನ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿದೆ.

ತಾಂತ್ರಿಕವಾಗಿ ಭರವಸೆ ಮೂಡಿಸಿದ ಚಿತ್ರ : ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಹಾಗೂ ಚಂದ್ರಶೇಖರ್ ಕೆ.ಎಸ್. ಛಾಯಾಗ್ರಹಣ ನೀಡಿದ್ದು, ಸ್ಯಾಮುವೆಲ್ ಅಬಿ ಸಂಗೀತ ಸಂಯೋಜಿಸಿದ್ದಾರೆ. ಟ್ರೇಲರ್‌ನಲ್ಲಿ ಹಿನ್ನೆಲೆ ಸಂಗೀತ, ಛಾಯಾಗ್ರಹಣ ಹಾಗೂ ದೃಶ್ಯ ವಿನ್ಯಾಸ ಉತ್ತಮ ಗುಣಮಟ್ಟದಲ್ಲಿರುವುದು ಗಮನ ಸೆಳೆಯುತ್ತದೆ.

ಇದನ್ನೂ ಓದಿ: ಐರನ್ ಮ್ಯಾನ್ ಟು ಡಾಕ್ಟರ್ ಡೂಮ್: ‘ಅವೆಂಜರ್ಸ್’ ಪೋಸ್ಟರ್ ವೈರಲ್!

ತುಳು ಮತ್ತು ಕನ್ನಡ ಭಾಷೆಗಳಲ್ಲಿ ನಿರ್ಮಾಣವಾಗಿರುವ ‘ಪಿಚ್ಚರ್’ ಸಿನಿಮಾ ಆಗಸ್ಟ್ 7ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಕುಟುಂಬ ಪ್ರೇಕ್ಷಕರನ್ನು ಸೆಳೆಯುವ ನಿರೀಕ್ಷೆಯಲ್ಲಿದೆ.