ಯಶ್‌ಗೆ 2026ರ ಡಬಲ್ ಧಮಾಕಾ; ‘ಟಾಕ್ಸಿಕ್’ ಬಳಿಕ ‘ರಾಮಾಯಣ’ದಲ್ಲಿ ರಾವಣನಾಗಿ ರಾಕಿಂಗ್ ಸ್ಟಾರ್ ಅಬ್ಬರಕ್ಕೆ ವೇದಿಕೆ ಸಜ್ಜು
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ 2026ನೇ ವರ್ಷ ಅತ್ಯಂತ ವಿಶೇಷವಾಗಲಿದ್ದು, ಅವರ ಎರಡು ಬಹು ನಿರೀಕ್ಷಿತ ಚಿತ್ರಗಳು ಜಾಗತಿಕ ಮಟ್ಟದಲ್ಲಿ ಭಾರೀ ಸದ್ದು ಮಾಡುವ ನಿರೀಕ್ಷೆಯಲ್ಲಿವೆ. ಒಂದು ಕಡೆ ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’, ಮತ್ತೊಂದೆಡೆ ನಿತೇಶ್ ತಿವಾರಿ ನಿರ್ದೇಶನದ ಪೌರಾಣಿಕ ಮಹಾಕಾವ್ಯ ‘ರಾಮಾಯಣ’ – ಈ ಎರಡೂ ಸಿನಿಮಾಗಳ ಮೂಲಕ ಯಶ್ ವಿಭಿನ್ನ ಅವತಾರಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
‘ಟಾಕ್ಸಿಕ್’ ಮೇಲೆ ಭಾರೀ ನಿರೀಕ್ಷೆ : ‘ಕೆಜಿಎಫ್’ ಸರಣಿಯ ನಂತರ ಯಶ್ ನಾಯಕನಾಗಿ ಅಭಿನಯಿಸುತ್ತಿರುವ ‘ಟಾಕ್ಸಿಕ್’ ಚಿತ್ರ ಈಗಾಗಲೇ ಜಾಗತಿಕ ಮಟ್ಟದಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಪ್ಯಾನ್-ವರ್ಡ್ ಆಕ್ಷನ್ ಡ್ರಾಮಾದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ನಿರ್ಮಿಸಲಾಗಿದ್ದು, ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಬಾರ್ ಬಳಿ ಕಾರು ಸ್ಫೋಟ: ಬೆಚ್ಚಿಬಿದ್ದ ಹಿಪ್ಪರಗಿ ಜನ..!
ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಪೋಸ್ಟರ್ ಹಾಗೂ ಪ್ರಚಾರ ಸಾಮಗ್ರಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಚಿತ್ರದ ಬಿಡುಗಡೆಗಾಗಿ ಕೌಂಟ್‌ಡೌನ್ ಆರಂಭಿಸಿದ್ದಾರೆ.
‘ರಾಮಾಯಣ’ದಲ್ಲಿ ರಾವಣನಾಗಿ ಯಶ್ : ಇದೇ ವೇಳೆ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ದಲ್ಲಿ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ದೇಶಾದ್ಯಂತ ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ, ಸಾಯಿ ಪಲ್ಲವಿ ಸೀತೆಯಾಗಿ ಅಭಿನಯಿಸುತ್ತಿದ್ದಾರೆ. ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಸಂಗೀತ ನೀಡುತ್ತಿರುವ ಈ ಮಹತ್ವಾಕಾಂಕ್ಷೆಯ ಯೋಜನೆ ಭಾರತೀಯ ಚಿತ್ರರಂಗದ ಅತ್ಯಂತ ದೊಡ್ಡ ನಿರ್ಮಾಣಗಳಲ್ಲಿ ಒಂದಾಗಿದೆ.
ಇದನ್ನೂ ಓದಿ: ಐರನ್ ಮ್ಯಾನ್ ಟು ಡಾಕ್ಟರ್ ಡೂಮ್: ‘ಅವೆಂಜರ್ಸ್’ ಪೋಸ್ಟರ್ ವೈರಲ್!
ಕಾಮಿಕ್-ಕಾನ್‌ನಲ್ಲಿ ಜಾಗತಿಕ ಗಮನ : ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ನಲ್ಲಿ ‘ರಾಮಾಯಣ’ ಚಿತ್ರದ ಪ್ರಸ್ತುತಿ ವಿಶ್ವದ ಸಿನಿಪ್ರಿಯರ ಗಮನ ಸೆಳೆದಿದೆ. ಚಿತ್ರದ ಝಲಕ್, ದೃಶ್ಯ ವೈಭವ ಹಾಗೂ ವಿಎಫ್‌ಎಕ್ಸ್ ಗುಣಮಟ್ಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಭಾರತೀಯ ಸಿನಿಮಾ ಜಾಗತಿಕ ಮಟ್ಟದಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದೆ ಎಂದು ಸಿನಿ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಟ್ರೈಲರ್‌ನ ಜಾಗತಿಕ ಆನ್‌ಲೈನ್ ಬಿಡುಗಡೆ ಬಳಿಕದ ದಿನಾಂಕಕ್ಕೆ ಮುಂದೂಡಲಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಎರಡು ವಿಭಿನ್ನ ಪಾತ್ರಗಳು, ಒಂದೇ ವರ್ಷ : ಒಂದೆಡೆ ಗ್ಯಾಂಗ್‌ಸ್ಟರ್ ಕಥೆಯ ‘ಟಾಕ್ಸಿಕ್’, ಮತ್ತೊಂದೆಡೆ ಪೌರಾಣಿಕ ಮಹಾಕಾವ್ಯದ ರಾವಣ – ಈ ಎರಡು ಪಾತ್ರಗಳು ಯಶ್ ಅವರ ನಟನಾ ಸಾಮರ್ಥ್ಯವನ್ನು ವಿಭಿನ್ನ ಆಯಾಮಗಳಲ್ಲಿ ಪರಿಚಯಿಸಲಿವೆ. ಅಭಿಮಾನಿಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಕುರಿತ ಕ್ಲಿಪ್‌ಗಳು, ಪೋಸ್ಟರ್‌ಗಳು ಹಾಗೂ ಕೌಂಟ್‌ಡೌನ್ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದು, 2026 ಯಶ್ ವರ್ಷವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.






















