Home Advertisement
Home ನಮ್ಮ ಜಿಲ್ಲೆ ಶಿವಮೊಗ್ಗ ಲಂಚ ಕೇಳಿ ಜೈಲು ಸೇರಿದ ಅಧಿಕಾರಿಗೆ ಸೊಳ್ಳೆಬತ್ತಿ, ಹಣ್ಣು ನೀಡಿದ ರೈತ!

ಲಂಚ ಕೇಳಿ ಜೈಲು ಸೇರಿದ ಅಧಿಕಾರಿಗೆ ಸೊಳ್ಳೆಬತ್ತಿ, ಹಣ್ಣು ನೀಡಿದ ರೈತ!

0
21

ಶಿವಮೊಗ್ಗ: ಭ್ರಷ್ಟಾಚಾರ ಬಲವಾಗಿ ಬೇರೂರಿದೆ. ಅನ್ನದಾತರು ಸಹ ಇದರಿಂದ ನಲುಗಿ ಹೋಗಿದ್ದಾರೆ. ಇದೀಗ ನೊಂದ ರೈತರೊಬ್ಬರು ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿಬಿದ್ದು ಜೈಲು ಪಾಲಾಗಿರುವ ಸರ್ಕಾರಿ ಅಧಿಕಾರಿಗೆ ಸೊಳ್ಳೆ ಕಚ್ಚದಿರಲಿ ಎಂದು ಸೊಳ್ಳೆಬತ್ತಿ, ತಿನ್ನಲು ಬ್ರೆಡ್, ಕಿತ್ತಲೆಹಣ್ಣು ಮತ್ತು ಬಾಳೆಹಣ್ಣು, ಸ್ನಾನಕ್ಕೆ ಮೈಸೂರು ಸ್ಯಾಂಡಲ್ ಸೋಪು ನೀಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಿದ್ದಲಿಂಗರೆಡ್ಡಿ ಅವರನ್ನು ಫೆ. 14ರಂದು ಲಂಚ ಪಡೆಯುವ ವೇಳೆ ಶಿವಮೊಗ್ಗದ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಬಲೆಗೆ ಬೀಳಿಸಿಕೊಂಡಿದ್ದರು. ಆ ಅಧಿಕಾರಿಯ ಕಾರ್ಯವೈಖರಿಯಿಂದ ನೊಂದ ತರೀಕೆರೆಯ ಶ್ರೀಗಂಧ ಬೆಳೆಗಾರ ವಿಶುಕುಮಾರ್ ಎಂಬುವವರು ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು.

ಇದನ್ನೂ ಓದಿ: ಬೈಕ್ ಡಿಕ್ಕಿಗೆ ತುಂಡಾದ ವಿದ್ಯುತ್ ಕಂಬ: CCTVಯ ದೃಶ್ಯ ವೈರಲ್

ತಲೆಮೇಲೆ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅವರು ಬಳಸುತ್ತಿದ್ದ ಶ್ರೀಗಂಧ ಪಾದುಕೆಯನ್ನು ಹೊತ್ತು ಸೋಗಾನೆಯ ಕೇಂದ್ರ ಕಾರಾಗೃಹಕ್ಕೆ ಬಂದು, ಭ್ರಷ್ಟಾಚಾರ ಆರೋಪ ಹೊತ್ತ ಅಧಿಕಾರಿಗೆ ವಿನೂತನ ರೀತಿಯಲ್ಲಿ ಬಿಸಿ ಮುಟ್ಟಿಸಿದ್ದಾರೆ. ನನ್ನ ಅತ್ಯಂತ ಬೆಲೆಬಾಳು ಶ್ರೀಗಂಧ ಮರಕ್ಕೆ ಕೇವಲ 420 ರೂಪಾಯಿ ನಿಗದಿ ಮಾಡಿದ್ದರು. ಈಗ ಲಂಚ ಪಡೆದ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಸರ್ಕಾರಕ್ಕೆ 6ನೇ ಗ್ಯಾರಂಟಿ ಕೊಡಲು ಹಣ ಉಳಿಸಿದ್ದರೇನೋ ಎಂದು ವಿಶುಕುಮಾರ್ ಲೇವಡಿ ಮಾಡಿದ್ದಾರೆ.

ಪ್ರಕೃತಿ ಮಾತೆಗೆ ನಾನು ಬೇಡಿಕೊಂಡಿದ್ದೆ ಶ್ರೀಗಂಧ ಮಾರಣ ಹೋಮ ಮಾಡುತ್ತಿದ್ದಾರೆ. ಅವರಿಗೆ ಶಿಕ್ಷೆ ಕೊಡಬೇಕೆಂದು ಕೇಳಿಕೊಂಡಿದ್ದೆ, ಇದೀಗ ಭ್ರಷ್ಟಾಚಾರ ಆರೋಪ ಹೊತ್ತ ಅಧಿಕಾರಿಗೆ ತಕ್ಕ ಶಾಸ್ತಿಯಾಗಿದೆ ಎಂದು ವಿಶುಕುಮಾರ್ ಹೇಳಿದರು.

Previous articleಲೈಂಗಿಕ ದೌರ್ಜನ್ಯ ಕೇಸ್: ಸೂರಜ್​ ರೇವಣ್ಣಗೆ ಮತ್ತೊಂದು ಶಾಕ್
Next articleಐಎಎಸ್ ಅಧಿಕಾರಿಗೆ 3 ಮದುವೆ: ಮೂವರು ಪತ್ನಿಯರೂ ಐಎಎಸ್