ಮುಂಬೈನಲ್ಲಿ ಮೆಟ್ರೋ ಕಾಮಗಾರಿ ದುರಂತ: ಸ್ಲ್ಯಾಬ್ ಕಂಬ ಕುಸಿದು ಒಬ್ಬ ಸಾವು, 3 ಜನರಿಗೆ ಗಾಯ
ಮುಂಬೈ: ನಗರದಲ್ಲಿ ಶನಿವಾರ ಭೀಕರ ಅವಘಡವೊಂದು ಸಂಭವಿಸಿದ್ದು, ಮುಲುಂಡ್ ವೆಸ್ಟ್‌ನ ಎಲ್‌ಬಿಎಸ್ ಮಾರ್ಗದಲ್ಲಿ ನಿರ್ಮಾಣ ಹಂತದಲ್ಲಿರುವ ಮುಂಬೈ ಮೆಟ್ರೋ ಲೈನ್–4 ಕಾಮಗಾರಿಯ ವೇಳೆ ಬೃಹತ್ ಕಾಂಕ್ರೀಟ್ ಸ್ಲ್ಯಾಬ್ ಹಠಾತ್ತನೆ ರಸ್ತೆಗೆ ಕುಸಿದು ಬಿದ್ದಿದೆ. ಈ ದುರ್ಘಟನೆ ಜಾನ್ಸನ್ ಆಂಡ್ ಜಾನ್ಸನ್ ಕಚೇರಿ ಸಮೀಪದ ಓಬೆರಾಯ್ ಪ್ರೆಮಿಸಸ್ ಬಳಿ ನಡೆದಿದೆ.
ಮೆಟ್ರೋ ಪಿಲ್ಲರ್‌ಗೆ ಅಳವಡಿಸಲಾಗಿದ್ದ ಭಾರೀ ಗಾತ್ರದ ಕಾಂಕ್ರೀಟ್ ಸ್ಲ್ಯಾಬ್ ಏಕಾಏಕಿ ಕೆಳಗೆ ಬಿದ್ದು, ಆ ಸಮಯದಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಆಟೋ ರಿಕ್ಷಾ ಹಾಗೂ ಕಾರುಗಳ ಮೇಲೆ ಬಿದ್ದಿದೆ. ಪರಿಣಾಮವಾಗಿ ವಾಹನಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ.
ಇದನ್ನೂ ಓದಿ: ಐತಿಹಾಸಿಕ ಕ್ಷಣ: ತುರ್ತು ಲ್ಯಾಂಡಿಂಗ್ ಸೌಲಭ್ಯದಲ್ಲಿ ಪ್ರಧಾನಿ ಮೋದಿ ವಿಮಾನ ಲ್ಯಾಂಡಿಂಗ್
ಘಟನೆಯ ವೇಳೆ ಆಟೋ ಚಾಲಕ ಮತ್ತು ಓರ್ವ ಮಹಿಳೆ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದು, ಸ್ಥಳೀಯ ನಿವಾಸಿಗಳು ಮತ್ತು ರಕ್ಷಣಾ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಅವರನ್ನು ಹರಸಾಹಸಪಟ್ಟು ಹೊರತೆಗೆದಿದ್ದಾರೆ. ಈ ಅವಘಡದಲ್ಲಿ ಸುಮಾರು 3ರಿಂದ 4 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು, ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಕೆಲಕಾಲ ಈ ಮಾರ್ಗದಲ್ಲಿ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಬೇರೆ ಮಾರ್ಗಗಳಿಗೆ ತಿರುಗಿಸಲಾಯಿತು.
ಇದನ್ನೂ ಓದಿ: ಪ್ರೇಮಿಗಳ ದಿನಕ್ಕೆ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದ ‘ಹಲ್ಕಾ ಡಾನ್ʼ
ಮೆಟ್ರೋ ಕಾಮಗಾರಿಯಲ್ಲಿ ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಪಾಲಿಸಲಾಗಿದೆಯೇ ಎಂಬ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಈ ಘಟನೆಯು ನಗರದಲ್ಲಿನ ಮೂಲಸೌಕರ್ಯ ಕಾಮಗಾರಿಗಳ ಸುರಕ್ಷತೆ ಕುರಿತು ಮತ್ತೆ ಚರ್ಚೆಗೆ ಕಾರಣವಾಗಿದೆ.
ಇತ್ತಿಚಿನ ವರದಿ ಬಂದಾಗ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ರಾಮಧನ್ ಯಾದವ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ರಾಜ್‌ಕುಮಾರ್ ಇಂದ್ರಜೀತ್ ಯಾದವ್ (45) ಐಸಿಯುನಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ, ಮಹೇಂದ್ರ ಪ್ರತಾಪ್ ಯಾದವ್ (52) ಮತ್ತು ದೀಪಾ ರುಹಿಯಾ (40) ಸ್ಥಿರವಾಗಿದ್ದಾರೆ.
ತನಿಖೆಗೆ ಆದೇಶ: ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿ (CMO) ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಘಟನೆಯ ತನಿಖೆಗೆ ಆದೇಶಿಸಿದ್ದಾರೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತಾ, ಮುಖ್ಯಮಂತ್ರಿ ಫಡ್ನವೀಸ್ ಅವರು ಮೃತರ ಕುಟುಂಬಕ್ಕೆ 5 ಲಕ್ಷ ರೂ.ಗಳ ಆರ್ಥಿಕ ಸಹಾಯವನ್ನು ಘೋಷಿಸಿದ್ದಾರೆ.





















