ಪಣಜಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಗೋವಾಗೆ ಆಗಮಿಸಿದ್ದು, ಅವರ ಭೇಟಿಯ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ನಲ್ಲಿ ತೀವ್ರ ಭಿನ್ನಮತ ಭುಗಿಲೆದ್ದಿದ್ದು, ಇತ್ತ ಬಿಜೆಪಿ ಪ್ರತಿಭಟನೆಯಿಂದ ಉದ್ವಿಗ್ನತೆ ಸೃಷ್ಟಿಯಾಗಿದೆ.
ಗೋವಾದ ದಾಬೋಲಿಂ ವಿಮಾನ ನಿಲ್ದಾಣಕ್ಕೆ ಖರ್ಗೆ ಅವರು ಆಗಮಿಸುತ್ತಿದ್ದಂತೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ತೀವ್ರ ಘೋಷಣೆಗಳನ್ನು ಕೂಗಿದರು. ವಿಮಾನ ನಿಲ್ದಾಣದಿಂದ ಹೊರಡುತ್ತಿದ್ದ ಖರ್ಗೆ ಅವರ ಬೆಂಗಾವಲು ಪಡೆಯನ್ನು ತಡೆಯಲು ಬಿಜೆಪಿ ಕಾರ್ಯಕರ್ತರು ಯತ್ನಿಸಿದಾಗ, ಸ್ಥಳಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಸಹ ಜಮಾಯಿಸಿದರು. ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ವಾತಾವರಣ ಕಾವೇರಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ವೆರ್ನಾದಲ್ಲಿ ನಡೆಯಲಿರುವ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಖರ್ಗೆ ಅವರು ಭಾಗವಹಿಸಿ ಮಾರ್ಗದರ್ಶನ ನೀಡಬೇಕಿತ್ತು. ಆದರೆ, ಈ ಕಾರ್ಯಕ್ರಮಕ್ಕೂ ಮುಂಚಿತವಾಗಿಯೇ ಕಾಂಗ್ರೆಸ್ನ 108 ಬೂತ್ ಮಟ್ಟದ ಏಜೆಂಟ್ಗಳು (ಬಿಎಲ್ಎ) ತಮ್ಮ ಹುದ್ದೆಗಳಿಗೆ ದಿಢೀರ್ ರಾಜೀನಾಮೆ ನೀಡಿ ಪಕ್ಷಕ್ಕೆ ಆಘಾತ ನೀಡಿದ್ದಾರೆ. ಅವರೆಲ್ಲರೂ ತಮ್ಮ ರಾಜೀನಾಮೆ ಪತ್ರಗಳನ್ನು ಮುಖ್ಯ ಚುನಾವಣಾಧಿಕಾರಿ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿಗೆ ರವಾನಿಸಿದ್ದಾರೆ. ಇದರಿಂದಾಗಿ ಪಕ್ಷದ ಆಂತರಿಕ ಅಸಮಾಧಾನ ಮತ್ತೊಮ್ಮೆ ಬಹಿರಂಗಗೊಂಡಿದ್ದು, ಈ ಬೆಳವಣಿಗೆಗೆ ಕಾಂಗ್ರೆಸ್ನಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ಮೂರು ತಿಂಗಳ ಹಿಂದೆ ರಾಜ್ಯ ಕಾಂಗ್ರೆಸ್ನಲ್ಲಿ ಉಂಟಾದ ನಾಯಕತ್ವ ಬದಲಾವಣೆಯೇ ಈ ರಾಜೀನಾಮೆಗಳಿಗೆ ಪ್ರಮುಖ ಕಾರಣ ಎನ್ನಲಾಗಿದೆ. ಅಂದಿನ ಅಧ್ಯಕ್ಷ ಅಮಿತ್ ಪಾಟ್ಕರ್ ಅವರನ್ನು ಹುದ್ದೆಯಿಂದ ತೆಗೆದುಹಾಕಿ ಗಿರೀಶ್ ಚೋಡಂಕರ್ ಅವರನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಈ ನಿರ್ಧಾರದಿಂದ ಮಾಜಿ ಅಧ್ಯಕ್ಷ ಅಮಿತ್ ಪಾಟ್ಕರ್ ಹಾಗೂ ಅವರ ಬೆಂಬಲಿಗರಾದ ಮನೀಷಾ ಉಜ್ಗಾಂವ್ಕರ್ ಸೇರಿದಂತೆ ಹಲವು ಕಾರ್ಯಕರ್ತರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.
ದಕ್ಷಿಣ ಗೋವಾ ಸಂಸದ ಕ್ಯಾಪ್ಟನ್ ವಿರಿಯಾಟೊ ಫೆರ್ನಾಂಡಿಸ್ ಕೂಡ ಅಧ್ಯಕ್ಷರ ಬದಲಾವಣೆ ವೇಳೆ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ಪ್ರಸ್ತುತ ಪಕ್ಷದಲ್ಲಿದ್ದರೂ ಅಮಿತ್ ಪಾಟ್ಕರ್ ಅವರು ಕಾಂಗ್ರೆಸ್ ಕಾರ್ಯಕ್ರಮಗಳಿಂದ ದೂರ ಉಳಿದು ಸ್ವತಂತ್ರವಾಗಿ ಚಳವಳಿ ನಡೆಸುತ್ತಿದ್ದಾರೆ ಹಾಗೂ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಲು ಅವಕಾಶ ನೀಡದಿರುವ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ.
ವೆರ್ನಾದ ಕಾರ್ಯಕ್ರಮದ ನಂತರ, ಮಂಗಳವಾರ ರಾಷ್ಟ್ರೀಯ ಅಧ್ಯಕ್ಷರ ಉಪಸ್ಥಿತಿಯಲ್ಲಿ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ಸಭೆ ನಡೆಯಲಿದೆ. ಕಾಂಗ್ರೆಸ್ ಶಾಸಕರು, ರಾಜ್ಯ ಅಧ್ಯಕ್ಷರು ಮತ್ತು ಬಿಎಲ್ಎಗಳು ಈ ಸಮಿತಿಯ ಸದಸ್ಯರಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯ ಕಾರ್ಯತಂತ್ರಗಳು, ಮೈತ್ರಿ ಮಾತುಕತೆಗಳು ಹಾಗೂ ಚುನಾವಣಾ ಸಿದ್ಧತೆಗಳ ಕುರಿತು ಈ ಸಭೆಯಲ್ಲಿ ಚರ್ಚೆಯಾಗಲಿದೆ. ಈಗಾಗಲೇ ವಿರೋಧ ಪಕ್ಷಗಳ ಮೈತ್ರಿಗೆ ಕಾಂಗ್ರೆಸ್ ಚಾಲನೆ ನೀಡಿದ್ದು, ʻಆರ್ಜಿʼ ಪಕ್ಷಕ್ಕೂ ಚರ್ಚೆಯ ಪತ್ರವನ್ನು ಕಳುಹಿಸಿದೆ. ಆದರೆ 108 ಬಿಎಲ್ಎಗಳ ರಾಜೀನಾಮೆ ಹಾಗೂ ಬಿಜೆಪಿ ಪ್ರತಿಭಟನೆಯು ಪಕ್ಷಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.




















