ದಾಂಡೇಲಿ ನಗರಸಭೆ ಸ್ವೀಪರ್ ಕ್ವಾಟರ್ಸ್ ಕಬಳಿಕೆ: ಜಿಲ್ಲಾಧಿಕಾರಿಯಿಂದ ಕ್ರಮಕ್ಕೆ ಒತ್ತಾಯ
ದಾಂಡೇಲಿ (ಉತ್ತರ ಕನ್ನಡ): ದಾಂಡೇಲಿ ನಗರಸಭೆಯಲ್ಲಿ ನಡೆದ ಭೂ ಕಬಳಿಕೆ ಹಾಗೂ ಆಶ್ರಯ ಸೈಟ್ ಚೋರಿ ಹಗರಣದ ಬೆನ್ನಲ್ಲೇ ಇದೀಗ ಸ್ವೀಪರ್ ಕ್ವಾಟರ್ಸ್‌ಗಳ ಕಬಳಿಕೆ ಪ್ರಕರಣಗಳು ಬೆಳಕಿಗೆ ಬಂದಿದ್ದು, ನಗರಸಭೆಯೊಳಗಿನ ಭ್ರಷ್ಟಾಚಾರ ಮತ್ತೊಮ್ಮೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ ನಗರಸಭೆಯ ಕೆಲವು ಸದಸ್ಯರು, ಪತ್ರಕರ್ತರು ಹಾಗೂ ಪ್ರಭಾವಿ ವ್ಯಕ್ತಿಗಳು ಸೇರಿಕೊಂಡು ಆಶ್ರಯ ಯೋಜನೆಯಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ನಿವೇಶನಗಳನ್ನು ಪಡೆದಿರುವ ಆರೋಪಗಳು ಕೇಳಿಬಂದಿದ್ದವು. ಈ ಪ್ರಕರಣದಲ್ಲಿ ಸುಮಾರು 1600ಕ್ಕೂ ಹೆಚ್ಚು ಸೈಟ್‌ಗಳ ಅಕ್ರಮ ಹಂಚಿಕೆ ನಡೆದಿರುವ ಬಗ್ಗೆ ಲೋಕಾಯುಕ್ತ ಹಾಗೂ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿವೆ.
ಇತ್ತೀಚೆಗೆ ಡಿ.ಎಫ್.ಎ. ಟೌನ್‌ಶಿಪ್‌ನ ಗಾಂಧಿನಗರ ಪ್ರದೇಶದಲ್ಲಿ ಸಂದೇಶ ಜೈನ್ ಎಂಬ ಪತ್ರಕರ್ತರು ತಮ್ಮ ಪತ್ನಿಯ ಹೆಸರಿನಲ್ಲಿ ಆಶ್ರಯ ಸೈಟ್ ಪಡೆದಿದ್ದರೂ, ಮತ್ತೊಂದು ನಕಲಿ ದಾಖಲೆ ಸೃಷ್ಟಿಸಿ ಮತ್ತೊಂದು ನಿವೇಶನಕ್ಕೆ ಬೇಲಿ ಹಾಕಿದ ಪ್ರಕರಣ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಎರಡು ದಿನಗಳ ಕಾಲ ಮಹಿಳೆಯರು ಸೇರಿದಂತೆ ಸಾರ್ವಜನಿಕರು ಪ್ರತಿಭಟನೆ ನಡೆಸಿದ ನಂತರ ನಗರಸಭೆ ಆ ಸೈಟ್ ತೆರವುಗೊಳಿಸಿ ನೋಟಿಸ್ ಬೋರ್ಡ್ ಅಳವಡಿಸಿತ್ತು.
ಈ ಪ್ರಕರಣಗಳ ಬೆನ್ನಲ್ಲೇ ಇದೀಗ ನಗರಸಭೆಯ ಸ್ವೀಪರ್ ಕ್ವಾಟರ್ಸ್‌ಗಳ ಮೇಲೆ ಖಾಸಗಿ ವ್ಯಕ್ತಿಗಳ ಕಣ್ಣು ಬಿದ್ದಿದೆ ಎಂಬ ಆರೋಪಗಳು ಕೇಳಿಬಂದಿವೆ. ಕೆಲ ನಗರಸಭಾ ಸಿಬ್ಬಂದಿಗಳು ಹಿಂದಿನ ಪೌರಾಯುಕ್ತರ ಸಹಿಗಳನ್ನು ಪೋರ್ಜರಿ ಮಾಡಿ ನಕಲಿ ದಾಖಲೆ ಸೃಷ್ಟಿಸಿರುವ ಶಂಕೆ ವ್ಯಕ್ತವಾಗಿದೆ. ಆಶ್ರಯ ಯೋಜನೆಯ ನಕಲಿ ಪಟ್ಟಾ ತಯಾರಿಸಿ ಮಾರಾಟ ಮಾಡಿರುವ ಆರೋಪವೂ ಇದೆ.
ನಗರಸಭೆಯಲ್ಲಿ 30ಕ್ಕೂ ಹೆಚ್ಚು ಸ್ವೀಪರ್ ಕ್ವಾಟರ್ಸ್‌ಗಳು ಇದ್ದು, ಇವು ಟೌನ್‌ಶಿಪ್‌ನ ಹಳೆಯ ನಗರಸಭಾ ಕಚೇರಿ ಸುತ್ತಮುತ್ತ ಇರುವ ಪ್ರಮುಖ ಪ್ರದೇಶದಲ್ಲಿವೆ. ಈ ಮನೆಗಳನ್ನು ನೈರ್ಮಲ್ಯ ಹಾಗೂ ಪೌರಕಾರ್ಮಿಕರಿಗೆ ನೀಡಬೇಕಾದರೂ, ನಿವೃತ್ತ ನೌಕರರು ಹಾಗೂ ಖಾಸಗಿ ವ್ಯಕ್ತಿಗಳು ವಾಸಿಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಇವರಿಗೆ ಈ ಮನೆಗಳನ್ನು ಯಾರು ಮಂಜೂರು ಮಾಡಿದರು? ದಾಖಲೆಗಳು ಹೇಗೆ ಸೃಷ್ಟಿಯಾದವು? ಎಂಬ ಪ್ರಶ್ನೆಗಳು ಉದ್ಭವವಾಗಿವೆ.
ಸ್ವೀಪರ್ ಕ್ವಾಟರ್ಸ್ ಕಬಳಿಕೆ ಕುರಿತು ದೂರು: ನಗರದ ಬಾಂಬೆಚಾಳದ ನಿವಾಸಿ ಹಾಜೀ ದಾ ಆಝಾದ್ ನದಾಫ ಅವರು ಈ ಕುರಿತು ಪೌರಾಯುಕ್ತರಿಗೆ ದೂರು ನೀಡಿದ್ದಾರೆ. ಟೌನ್‌ಶಿಪ್‌ನ ಸಿ.ಎಸ್.ಐ ಚರ್ಚ್ ಸಮೀಪದ ಸ್ವೀಪರ್ ಕಾಲೋನಿಯೊಂದರಲ್ಲಿ ಖಾಸಗಿ ವ್ಯಕ್ತಿಗಳು ಮನೆ ಮಂಜೂರು ಮಾಡಿಕೊಂಡು, ನಗರಸಭೆಯ ಅನುಮತಿ ಪಡೆಯದೆ ಕಟ್ಟಡವನ್ನು ಒಡೆದು ನವೀಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ನವೀಕರಣ ಕಾರ್ಯದಲ್ಲಿ ಮಾಜಿ ನಗರಸಭಾ ಸದಸ್ಯರೊಬ್ಬರು ತೊಡಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಸರ್ಕಾರಿ ವಸತಿ ಗೃಹದ ಮೂಲ ಸ್ವರೂಪವನ್ನು ಬದಲಾಯಿಸಲು ನಗರಸಭೆಯ ಅಧಿಕೃತ ಅನುಮತಿ ಅಗತ್ಯವಿದ್ದರೂ, ಅದನ್ನು ಉಲ್ಲಂಘಿಸಲಾಗಿದೆ ಎನ್ನಲಾಗಿದೆ. ಹಲವಾರು ವರ್ಷಗಳಿಂದ ಖಾಲಿ ಇರುವ ಈ ಮನೆಗಳನ್ನು ತಮಗೆ ವಾಸಕ್ಕೆ ನೀಡುವಂತೆ ಮನವಿ ಮಾಡುತ್ತಿದ್ದರೂ, ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಆದರೆ ಈಗ ಖಾಸಗಿ ವ್ಯಕ್ತಿಗಳಿಗೆ ಹೇಗೆ ಮಂಜೂರಿಯಾಗಿದೆ? ಎಂದು ಹಾಜೀ ನದಾಫ ಪ್ರಶ್ನಿಸಿದ್ದಾರೆ.
ಕಾರ್ಮಿಕ ಸಂಘದಿಂದ ತನಿಖೆಗೆ ಒತ್ತಾಯ: ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ಅಧ್ಯಕ್ಷ ಡಿ. ಸ್ವಾಮಸನ್ ಅವರು, ನೈರ್ಮಲ್ಯ ಕಾರ್ಮಿಕರಿಗೆ ಮೀಸಲಾದ ವಸತಿ ಗೃಹಗಳು ಖಾಸಗಿ ವ್ಯಕ್ತಿಗಳ ಪಾಲಾಗುತ್ತಿರುವುದನ್ನು ತಡೆಗಟ್ಟಬೇಕೆಂದು ಒತ್ತಾಯಿಸಿದ್ದಾರೆ. ಪ್ರಸ್ತುತ ನಗರಸಭೆಗೆ ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿಗಳಾಗಿರುವುದರಿಂದ, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪೌರಕಾರ್ಮಿಕರ ವಸತಿ ಹಕ್ಕುಗಳನ್ನು ರಕ್ಷಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಪ್ರಕರಣದಲ್ಲಿ ಶಾಮೀಲಾಗಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಮಾನತು ಮಾಡಿ ನ್ಯಾಯಾಂಗ ತನಿಖೆ ನಡೆಸಬೇಕು ಎಂಬ ಒತ್ತಾಯಗಳು ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿವೆ.






















