ಶೀಘ್ರದಲ್ಲೇ ಸುಮಾರು ₹17,000 ಕೋಟಿ ವೆಚ್ಚದಲ್ಲಿ ಅಂಕೋಲಾ–ಹುಬ್ಬಳ್ಳಿ ರೈಲು ಮಾರ್ಗ
ದಾಂಡೇಲಿ (ಉತ್ತರ ಕನ್ನಡ): ಬೆಂಗಳೂರಿನಿಂದ ಮಂಗಳೂರುವರೆಗೆ ಸಂಚರಿಸಲು ಉದ್ದೇಶಿಸಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಕಾರವಾರವರೆಗೆ ವಿಸ್ತರಿಸಲು ಕೇಂದ್ರ ಸರ್ಕಾರ ಪ್ರಯತ್ನಿಸಲಿದೆ ಎಂದು ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಶನಿವಾರ ದಾಂಡೇಲಿ ರೈಲ್ವೆ ನಿಲ್ದಾಣದಲ್ಲಿ ದಾಂಡೇಲಿಯಿಂದ ಅಳ್ನಾವರದವರೆಗೆ ಸಂಚರಿಸುವ ನೂತನ ಪ್ರಯಾಣಿಕ ರೈಲಿಗೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಂಕೋಲಾ–ಹುಬ್ಬಳ್ಳಿ ರೈಲು ಮಾರ್ಗವನ್ನು ಸುಮಾರು ₹17,000 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಯೋಜನೆಗೆ ಶೀಘ್ರದಲ್ಲೇ ಅಗತ್ಯ ಅನುಮತಿಗಳು ದೊರೆಯಲಿದ್ದು, ಅಳ್ನಾವರ–ದಾಂಡೇಲಿ ರೈಲು ಸೇವೆಯನ್ನು ಹುಬ್ಬಳ್ಳಿವರೆಗೆ ವಿಸ್ತರಿಸಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ಭಾರೀ ರೈಲ್ವೆ ಅಭಿವೃದ್ಧಿ: ರಾಜ್ಯದಲ್ಲಿ ಪ್ರಸ್ತುತ ₹52,952 ಕೋಟಿ ವೆಚ್ಚದಲ್ಲಿ ವಿವಿಧ ರೈಲ್ವೆ ಕಾಮಗಾರಿಗಳು ನಡೆಯುತ್ತಿವೆ. ಸುಮಾರು 3,840 ಕಿಲೋಮೀಟರ್ ಹೊಸ ರೈಲು ಮಾರ್ಗಗಳ ಯೋಜನೆಗಳು ಪ್ರಗತಿಯಲ್ಲಿವೆ ಎಂದು ಸಚಿವರು ಹೇಳಿದರು. ಇದಲ್ಲದೆ, 707 ಮೇಲ್ಸೇತುವೆ ಮತ್ತು ಕೆಳಸೇತುವೆ ನಿರ್ಮಾಣ, 61 ರೈಲ್ವೆ ನಿಲ್ದಾಣಗಳ ನವೀಕರಣ, ಹಲವು ನಿಲ್ದಾಣಗಳ ಉನ್ನತೀಕರಣ ಕಾರ್ಯಗಳು ನಡೆಯುತ್ತಿವೆ ಎಂದರು. ಈ ಹಿಂದೆ ಸಂಚರಿಸುತ್ತಿದ್ದರೂ ಪ್ರಸ್ತುತ ಸ್ಥಗಿತಗೊಂಡಿರುವ ರೈಲುಗಳನ್ನು ಆದ್ಯತೆಯ ಮೇರೆಗೆ ಪುನರಾರಂಭಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ನಿರಂತರ ಸೇವೆಗೆ ಬೇಡಿಕೆ: ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಆರ್. ವಿ. ದೇಶಪಾಂಡೆ, ಅಳ್ನಾವರ–ದಾಂಡೇಲಿ ರೈಲು ಸೇವೆ ಮಾಜಿ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಪ್ರಯತ್ನದಿಂದ ಆರಂಭಗೊಂಡಿತು ಎಂದು ಸ್ಮರಿಸಿದರು. ಈ ರೈಲು ಸೇವೆಯನ್ನು ನಿರಂತರವಾಗಿ ನಡೆಸಲು ಇದನ್ನು ಹುಬ್ಬಳ್ಳಿ ಅಥವಾ ಬೆಳಗಾವಿಗೆ ಸಂಪರ್ಕ ಕಲ್ಪಿಸಬೇಕು, ಭಾನುವಾರವೂ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಜೊತೆಗೆ, ಸ್ಥಗಿತಗೊಂಡಿರುವ ಹುಬ್ಬಳ್ಳಿ–ಪಂಡಾರಪುರ ನೇರ ರೈಲು ಸೇವೆ, ಮಿರಜ್–ಕ್ಯಾಸಲ್ ರಾಕ್ ಪ್ರಯಾಣಿಕ ರೈಲು ಸೇವೆ ಪುನರಾರಂಭಿಸಬೇಕೆಂದು ಮನವಿ ಮಾಡಿದರು.
ಹೊಸ ಮಾರ್ಗಗಳ ಬಗ್ಗೆ ಮಾಹಿತಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ತಾಳಗುಪ್ಪ–ಶಿರಸಿ–ಮುಂಡಗೋಡ–ಹುಬ್ಬಳ್ಳಿ ರೈಲು ಮಾರ್ಗದ ಸರ್ವೇ ಪೂರ್ಣಗೊಂಡಿದ್ದು, ಪ್ರಸ್ತುತ ಡಿಪಿಆರ್ ಹಂತದಲ್ಲಿದೆ ಎಂದರು. ದಾಂಡೇಲಿ ರೈಲ್ವೆ ನಿಲ್ದಾಣಕ್ಕೆ ಸೂಕ್ತ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಅವರು ತಿಳಿಸಿದರು. ಜಿಲ್ಲೆಯ ಜನತೆಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಪಕ್ಷಾತೀತವಾಗಿ ತಲುಪಿಸಲಾಗುತ್ತಿದೆ ಎಂದು ಹೇಳಿದರು.
ಗಣ್ಯರ ಉಪಸ್ಥಿತಿ: ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸುನಿಲ್ ಹೆಗಡೆ, ರೂಪಾಲಿ ನಾಯ್ಕ, ಘೋಟ್ನೆಕರ್, ಉಪ ವಿಭಾಗಾಧಿಕಾರಿ ಶ್ರವಣ ಕುಮಾರ್, ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಬೇಲಾಮೀನಾ, ಕೊಂಕಣ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಆಶಾ ಶೆಟ್ಟಿ, ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಎಸ್.ಪಿ. ಶಾಸ್ತ್ರಿ, ತಹಸೀಲ್ದಾರ್ ಶೈಲೇಶ್ ಪರಮಾನಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ: Metro ದರ ಏರಿಕೆಗೆ ತಾತ್ಕಾಲಿಕ ಬ್ರೇಕ್: ಬೆಂಗಳೂರಿಗರಿಗೆ ರಿಲೀಫ್
ಉತ್ತರ ಕನ್ನಡಕ್ಕೆ ರೈಲು ಸಂಪರ್ಕದಲ್ಲಿ ಹೊಸ ಭರವಸೆ: ವಂದೇ ಭಾರತ್ ರೈಲು ಕಾರವಾರವರೆಗೆ ವಿಸ್ತರಣೆ, ಅಂಕೋಲಾ–ಹುಬ್ಬಳ್ಳಿ ಹೊಸ ಮಾರ್ಗ ಹಾಗೂ ದಾಂಡೇಲಿ ಸಂಪರ್ಕ ವಿಸ್ತರಣೆ ಮೂಲಕ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ, ವ್ಯಾಪಾರ ಮತ್ತು ಕೈಗಾರಿಕೆಗೆ ಮಹತ್ತರ ಉತ್ತೇಜನ ಸಿಗಲಿದೆ ಎಂದು ಸ್ಥಳೀಯರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.






















