ಚಿತ್ರ: ಜೆಸಿ
ನಿರ್ದೇಶನ: ಚೇತನ್ ಜೈರಾಮ್
ನಿರ್ಮಾಣ: ಡಾಲಿ ಧನಂಜಯ್
ತಾರಾಗಣ: ಸೂರ್ಯ ಪ್ರಖ್ಯಾತ್, ಭಾವನಾ ರೆಡ್ಡಿ, ರಂಗಾಯಣ ರಘು, ಥ್ರಿಲ್ಲರ್ ಮಂಜು, ಪ್ರಖ್ಯಾತ್ ಪರಮೇಶ್ ಹಾಗೂ ವಿಜಯ್ ಸಿಂಹ ಇತರರು.
ರೇಟಿಂಗ್ಸ್: ***
- ಜಿ.ಆರ್.ಬಿ
ಮುಗ್ಧ ಹುಡುಗನೊಬ್ಬ ಅಚಾನಕ್ ಆಗಿ ರೌಡಿಸಂಗೆ ಎಂಟ್ರಿ ಕೊಡುವುದು… ಮುಂದೆ ಅದೇ ಅವನ ಆವರಿಸಿಕೊಂಡು ಲವ್ ಲೈಫ್‌ನಿಂದ ‘ಲಾಂಗ್’ ಲೈಫ್ ಆಗಿ ಪರಿವರ್ತನೆಗೊಳ್ಳುವ ಅನೇಕ ಸಿನಿಮಾಗಳು ಈಗಾಗಲೇ ಬಂದು ಹೋಗಿವೆ. ಕೆಲವೊಂದು ಈಗಲೂ ಮಾಸ್ಟರ್‌ಪೀಸ್ ಹಾಗೂ ಕ್ಲಾಸಿಕ್ ಸಿನಿಮಾಗಳಾಗಿ ಉಳಿದುಕೊಂಡಿವೆ. ಅದಾಗ್ಯೂ ರೌಡಿಸಂ ಕಥಾಹಂದರದ ಸಿನಿಮಾಗಳು ಬರುತ್ತಲೇ ಇರುತ್ತವೆ. ಆ ಪಟ್ಟಿಗೆ ‘ಜೆಸಿ’ ಹೊಸ ಸೇರ್ಪಡೆ.
ಮಧುಸೂದನ್ ಅಲಿಯಾಸ್ ಮ್ಯಾಡಿ (ಸೂರ್ಯ ಪ್ರಖ್ಯಾತ್) ಕಾಲೇಜಿಗೆ ಶಿಸ್ತಾಗಿ ಹೋಗಿ ಬರುವ ವಿದ್ಯಾರ್ಥಿ. ಆತನಿಗೊಬ್ಬಳು ಪ್ರೇಯಸಿ. ಒಂದಷ್ಟು ಸುತ್ತಾಟ, ಒಲವಿನ ಮುದ್ದಾಟ, ಸುತ್ತಾಟ… ಮನೆಗೆ ಬಂದರೆ ಅಪ್ಪ-ಅಮ್ಮನ ಅನ್‌ಲಿಮಿಟೆಡ್ ಊಟ, ಅಪರಿಮಿತ ಪ್ರೀತಿ… ಹೀಗೆ ಸ್ವಚ್ಛಂದ ಜೀವನ ಕಂಡುಕೊಂಡಿದ್ದ ಹದಿಹರೆಯದ ಹುಡುಗನ ಹಾಲಿನಂಥ ಬಾಳಿನಲ್ಲಿ ಹುಳಿ ಹಿಂಡಿಬಿಟ್ಟರೆ ಆತನ ಬದುಕು ಅಯೋಮಯವಾಗದೇ ಇರುತ್ತಾ..?
ಮಧು ಬಾಳಿನಲ್ಲಿ ಅಂಥದ್ದೊಂದು ಅಲ್ಲೋಲ-ಕಲ್ಲೋಲವಾಗುತ್ತದೆ. ಲಾಂಗ್ ಬುಕ್ ಹಿಡಿದು ಹೊರಟವನ ಕೈಯಲ್ಲಿ ಲಾಂಗು ಝಳಪಿಸುತ್ತದೆ. ಆತನ ರಕ್ತಸಿಕ್ತ ಮೈ-ಕೈ ಕಂಡು ಹೆತ್ತವರ ಕಣ್ಣು ಒದ್ದೆಯಾಗುತ್ತದೆ, ಏನೂ ಮಾಡಲಾಗದೇ ಕಂಗಾಲಾಗುತ್ತಾರೆ. ಮಧು ಜೈಲು ವಾಸ ಅನುಭವಿಸಿ ಹೊರ ಬರುವಷ್ಟರಲ್ಲಿ ಸಾಕಷ್ಟು ಬದಲಾವಣೆಗಳಾಗಿರುತ್ತದೆ. ಇಷ್ಟೆಲ್ಲಾ ನಡೆದ ಮೇಲೆ ಮ್ಯಾಡಿ ರೌಡಿಸಂ ಲೋಕದಲ್ಲಿರುತ್ತಾನಾ… ಮೊದಲಿನಂತೆ ಶಿಸ್ತಿನ ಸಿಪಾಯಿ ಆಗಿಯೇ ಮುಂದುವರಿಯುತ್ತಾನಾ ಎಂಬುದೇ ಸಿನಿಮಾದ ಪ್ರಮುಖ ಅಂಶ.
ಭೂಗತಲೋಕದ ಕಥೆಯನ್ನು ನಾನ್-ಲೀನಿಯರ್ ನಿರೂಪಣೆಯಲ್ಲಿ ಕಟ್ಟಿಕೊಟ್ಟಿದ್ದಾರೆ ಯುವ ನಿರ್ದೇಶಕ ಚೇತನ್ ಜೈರಾಮ್. ಕೆಲವೊಮ್ಮೆ ನಿರೂಪಣೆ ನೀರಸ ಎನಿಸಿದರೂ, ಅದನ್ನು ಸಂಭಾಷಣೆ (ಮಾಸ್ತಿ) ಮೂಲಕ ಸರಿದೂಗಿಸುವ ಪ್ರಯತ್ನ ಮಾಡಲಾಗಿದೆ.
ಸೂರ್ಯ ಪ್ರಖ್ಯಾತ್ ಮ್ಯಾಡಿಯಾಗಿ ಸಾಕಷ್ಟು ಮಾಗಿದ್ದಾರೆ. ಎರಡೂ ಶೇಡ್‌ನಲ್ಲಿ ಗಮನಾರ್ಹ ಅಭಿನಯ. ಭಾವನಾ ಇದ್ದಷ್ಟು ಹೊತ್ತು ಆಪ್ತವಾಗುತ್ತಾರೆ. ಥ್ರಿಲ್ಲರ್ ಮಂಜು ‘ಗುರು’ವಾಗಿ, ರಂಗಾಯಣ ಅಪ್ಪನಾಗಿ ತಮ್ಮ ಕರ್ತವ್ಯ ಮೆರೆದಿದ್ದಾರೆ. ರೋಹಿತ್ ಸೋವರ್ ಸಂಗೀತದಲ್ಲಿ ಒಂದೆರಡು ಹಾಡು ಕೇಳಬಲ್, ಹಿನ್ನೆಲೆ ಸಂಗೀತದಲ್ಲಿ ಕೆಲವೆಡೆ ಅಬ್ಬರಿಸಿದ್ದಾರೆ.























