Home Advertisement
Home ಸುದ್ದಿ ರಾಜ್ಯ ಮಾಲೂರು ಕ್ಷೇತ್ರ ಮರು ಮತ ಎಣಿಕೆಯಲ್ಲಿ ನಂಜೇಗೌಡ ಗೆಲುವು ದೃಢ

ಮಾಲೂರು ಕ್ಷೇತ್ರ ಮರು ಮತ ಎಣಿಕೆಯಲ್ಲಿ ನಂಜೇಗೌಡ ಗೆಲುವು ದೃಢ

0
218

ನವದೆಹಲಿ: ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಕುರಿತಾಗಿ ತೀವ್ರ ಕುತೂಹಲ ಕೆರಳಿಸಿದ್ದ ಪ್ರಕರಣದಲ್ಲಿ, ಹಾಲಿ ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಅವರೇ ಗೆಲುವು ಸಾಧಿಸಿರುವುದು ಸುಪ್ರೀಂಕೋರ್ಟ್‌ನಲ್ಲಿ ದೃಢಪಟ್ಟಿದೆ.

ಕರ್ನಾಟಕ ಹೈಕೋರ್ಟ್ ನೀಡಿದ್ದ ಮರು ಮತ ಎಣಿಕೆ ಹಾಗೂ ಫಲಿತಾಂಶ ಮರು ಘೋಷಣೆಯ ಆದೇಶವನ್ನು ಪ್ರಶ್ನಿಸಿ ನಂಜೇಗೌಡ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಅಂಗೀಕರಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಅವರನ್ನು ಒಳಗೊಂಡ ನ್ಯಾಯಪೀಠ, ಹೈಕೋರ್ಟ್ ಆದೇಶವನ್ನು ವಜಾಗೊಳಿಸಿ ನಂಜೇಗೌಡ ಅವರ ಪರ ತೀರ್ಪು ನೀಡಿದೆ.

ಇದನ್ನೂ ಓದಿ: ಬೆಳಗಾವಿ: ಮಹಿಳಾ ಅಧಿಕಾರಿಗೆ ಹಿಡನ್ ಕ್ಯಾಮರಾ ಬ್ಲ್ಯಾಕ್‌ಮೇಲ್

ಮರು ಮತ ಎಣಿಕೆಯ ನಂತರ ನಂಜೇಗೌಡ ಅವರು ಬಿಜೆಪಿಯ ಪ್ರತಿಸ್ಪರ್ಧಿ ಅಭ್ಯರ್ಥಿ ಕೆ.ಎಸ್. ಮಂಜುನಾಥ ಗೌಡ ಅವರಿಗಿಂತ 250 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

2023ರ ಚುನಾವಣೆಯ ಹಿನ್ನೆಲೆ: 2023ರ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಲ್ಲಿ ನಂಜೇಗೌಡ ಅವರು ಕೇವಲ 248 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆ ವೇಳೆ ನಂಜೇಗೌಡ 50,955 ಮತಗಳನ್ನು ಪಡೆದಿದ್ದರೆ, ಮಂಜುನಾಥ ಗೌಡ 50,707 ಮತಗಳನ್ನು ಪಡೆದಿದ್ದರು. ಈ ಅಲ್ಪ ಅಂತರದ ಹಿನ್ನೆಲೆ ಮಂಜುನಾಥ ಗೌಡ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಮರು ಮತ ಎಣಿಕೆಗೆ ಮನವಿ ಮಾಡಿದ್ದರು.

ಇದನ್ನೂ ಓದಿ: ಮೈಸೂರು: ಅಧಿಕಾರಿಗಳ ಮನೆ ಸೇರಿದಂತೆ ಏಳು ಕಡೆ ಲೋಕಾ ದಾಳಿ

ಈ ಅರ್ಜಿಯನ್ನು ಪರಿಗಣಿಸಿದ್ದ ಕರ್ನಾಟಕ ಹೈಕೋರ್ಟ್, ಮತಗಳ ಮರು ಎಣಿಕೆ ನಡೆಸಿ ಫಲಿತಾಂಶವನ್ನು ಹೊಸದಾಗಿ ಘೋಷಿಸುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ನಂಜೇಗೌಡ ಅವರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಸುಪ್ರೀಂಕೋರ್ಟ್ ಸೂಚನೆ ಮತ್ತು ಮರು ಎಣಿಕೆ: ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನಂಜೇಗೌಡ ಅವರ ಮೇಲ್ಮನವಿಯನ್ನು ಸ್ವೀಕರಿಸಿದ್ದ ಸುಪ್ರೀಂಕೋರ್ಟ್, ಮರು ಮತ ಎಣಿಕೆ ನಡೆಸಿ ಫಲಿತಾಂಶವನ್ನು ಸೀಲ್ ಮಾಡಿದ ಕವರ್‌ನಲ್ಲಿ ಸಲ್ಲಿಸುವಂತೆ ಚುನಾವಣಾಧಿಕಾರಿಗೆ ಸೂಚಿಸಿತ್ತು. ಅದರಂತೆ, 2025ರ ನವೆಂಬರ್ 11ರಂದು ಮರು ಮತ ಎಣಿಕೆ ನಡೆಸಲಾಗಿತ್ತು. ಈ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಭದ್ರವಾಗಿ ಇರಿಸಲಾಗಿತ್ತು.

ಇದನ್ನೂ ಓದಿ: ಮೈಸೂರು — ಸಿಗರೇಟ್ ಫೋಟೋಶೂಟ್ ವಿವಾದ: ಮತ್ತೆ ಸಂಕಷ್ಟದಲ್ಲಿ ಬಿಗ್ ಬಾಸ್ ಸ್ಪರ್ಧಿ ರಜತ್

ಇಂದು ಸುಪ್ರೀಂಕೋರ್ಟ್‌ನಲ್ಲಿ ಕಕ್ಷಿದಾರರ ಸಮ್ಮುಖದಲ್ಲಿ ಆ ಲಕೋಟೆಯನ್ನು ತೆರೆಯಲಾಗಿದ್ದು, ಮರು ಎಣಿಕೆಯ ಬಳಿಕವೂ ನಂಜೇಗೌಡ ಅವರೇ ಗೆದ್ದಿರುವುದು ದೃಢಪಟ್ಟಿದೆ.

ಅಂತಿಮ ಫಲಿತಾಂಶ: ಮರು ಎಣಿಕೆಯ ಅಂತಿಮ ಫಲಿತಾಂಶದ ಪ್ರಕಾರ, ಕೆ.ವೈ. ನಂಜೇಗೌಡ – 50,957 ಮತಗಳು, ಕೆ.ಎಸ್. ಮಂಜುನಾಥ ಗೌಡ – 50,707 ಮತಗಳು, ಪಡೆಯುವ ಮೂಲಕ ನಂಜೇಗೌಡ ಅವರು 250 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: NH-50ರಲ್ಲಿನ ಕಾರ್ ಸರ್ವೀಸ್ ಸೆಂಟರ್‌ನಲ್ಲಿ ಭಾರೀ ಅಗ್ನಿ ಅವಘಡ

ಈ ಮೂಲಕ ಮಾಲೂರು ಕ್ಷೇತ್ರದ ಶಾಸಕರಾಗಿ ನಂಜೇಗೌಡ ಮುಂದುವರೆಯಲಿದ್ದು, ಕ್ಷೇತ್ರದಲ್ಲಿ ರಾಜಕೀಯ ಚರ್ಚೆಗೆ ತೆರೆ ಬಿದ್ದಿದೆ.

Previous articleಉತ್ತರ ಕರ್ನಾಟಕದ 2 ರೈಲಿಗೆ ಭೂ ಕಗ್ಗಂಟು
Next articleಜಾಲತಾಣಗಳಲ್ಲಿ ದ್ವೇಷವನ್ನುಂಟುಮಾಡುವ ಪೋಸ್ಟ್‌‌: ಇಬ್ಬರು ಅರೆಸ್ಟ್