ದಾಂಡೇಲಿ: ಸಾರ್ವಜನಿಕ ಸೇವೆ, ಪಾರದರ್ಶಕತೆ ಮತ್ತು ಕಂದಾಯ ಇಲಾಖೆಯ ವಿಶ್ವಾಸಾರ್ಹತೆಯನ್ನು ಬಲಪಡಿಸಲು ವಿಶೇಷ ಕಾರ್ಯಕ್ರಮಗಳು, ಕ್ರೀಡಾಕೂಟಗಳ ಮೂಲಕ ಸಿಬ್ಬಂದಿ ಮನೋಸ್ಥೈರ್ಯವನ್ನು ವೃದ್ಧಿಸಲು ದಾಂಡೇಲಿಯಲ್ಲಿ ಎರಡು ದಿನಗಳ ಕಂದಾಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ತಿಳಿಸಿದರು.
ದಾಂಡೇಲಿಯ ಡಿ.ಎಫ್.ಎ. ಮೈದಾನದಲ್ಲಿ ಉತ್ತರ ಕನ್ನಡ ಜಿಲ್ಲಾ ಕಂದಾಯ ದಿನಾಚರಣೆಯ ಅಂಗವಾಗಿ ಶನಿವಾರ ಎರಡು ದಿನಗಳ ಸಿಬ್ಬಂದಿ ಮತ್ತು ಅಧಿಕಾರಿಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಪ್ರತಿನಿತ್ಯ ಕಂದಾಯ ಇಲಾಖೆಯ ನೌಕರರು ಜನಪರ ಆಡಳಿತಾತ್ಮಕ ಸೇವೆಗಳನ್ನು ಮಾಡುತ್ತ ತೀವ್ರ ಒತ್ತಡದಲ್ಲಿರುತ್ತಾರೆ. ಅವರಿಗೆ ಎರಡು ದಿನಗಳ ಕಾಲ ಎಲ್ಲ ಒತ್ತಡಗಳನ್ನು ಮರೆತು ಉತ್ಸಾಹದಿಂದ ಕ್ರೀಡೆಯಲ್ಲಿ ಭಾಗವಹಿಸಿ ದೈಹಿಕ ಸಾಮರ್ಥ್ಯದೊಂದಿಗೆ ನೆಮ್ಮದಿಯಿಂದ ಮರಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿ ಸಾಜಿದ ಮುಲ್ಲಾ, ಶಿರಸಿಯ ಸಹಾಯಕ ಕಮೀಷನರ್ ಚಂದ್ರಶೇಖರ,ಕುಮಟಾ ಸಹಾಯಕ ಕಮೀಷನರ ಶ್ರವಣ ಕುಮಾರ, ಕಾರವಾರ ಭೂ ದಾಖಲೆಗಳ ಉಪ ನಿರ್ದೇಶಕರಾದ ಸಂದೀಪ ಉಪ್ಪಾರ, ಡಿವೈಎಸ್‌ಪಿ ಶಿವಾನಂದ ಮದರ ಖಂಡಿ, ಜಿಲ್ಲೆಯ ಎಲ್ಲ ತಾಲೂಕುಗಳ ತಹಶೀಲ್ದಾರರು, ಕಂದಾಯ ಸಿಬ್ಬಂದಿ ಪಾಲ್ಗೊಂಡಿದ್ದರು.
ನಂತರ ನಡೆದ ಕ್ರೀಡೆಯಲ್ಲಿ ಕಂದಾಯ ಅಧಿಕಾರಿಗಳು, ಸಿಬ್ಬಂದಿಗಾಗಿ ಡಿ.ಎಫ್.ಎ. ಮೈದಾನದಲ್ಲಿ ಕ್ರಿಕೆಟ್, ಓಟ ಸ್ಪರ್ಧೆಗಳು ನಡೆದರೆ, ಸುಭಾಸ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು. ಸಂಜೆ ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.






















