SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಗಂಗಾವಳಿ ನದಿಯ ಮಣ್ಣಿನ ದಿಬ್ಬ ತೆರವಿಗೆ ಸತೀಶ್ ಸೈಲ್ ಚಾಲನೆ

ಗಂಗಾವಳಿ ನದಿಯ ಮಣ್ಣಿನ ದಿಬ್ಬ ತೆರವಿಗೆ ಸತೀಶ್ ಸೈಲ್ ಚಾಲನೆ

0
18

ಶಿರೂರು ಭೂಕುಸಿತದ ಬಳಿಕ ಗಂಗಾವಳಿ ನದಿಯ ಮಣ್ಣಿನ ದಿಬ್ಬ ತೆರವಿಗೆ ₹4.34 ಕೋಟಿ ಕಾಮಗಾರಿಗೆ ಚಾಲನೆ : 72 ದಿನಗಳ ಶೋಧ ಕಾರ್ಯಾಚರಣೆ ನೆನಪಿಸಿಕೊಂಡ ಸತೀಶ್ ಸೈಲ್

ದಾಂಡೇಲಿ (ಉತ್ತರ ಕನ್ನಡ): ಕಳೆದ ವರ್ಷ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗ್ರಾಮದಲ್ಲಿ ಸಂಭವಿಸಿದ್ದ ಭೀಕರ ಭೂಕುಸಿತದ ಪರಿಣಾಮ ಗಂಗಾವಳಿ ನದಿಯಲ್ಲಿ ಸಂಗ್ರಹವಾಗಿದ್ದ ಅಪಾರ ಪ್ರಮಾಣದ ಮಣ್ಣಿನ ರಾಶಿಯನ್ನು ತೆರವುಗೊಳಿಸುವ ಮಹತ್ವದ ಕಾಮಗಾರಿಗೆ ಕೆ.ಎಂ.ಸಿ.ಎ ಅಧ್ಯಕ್ಷ ಹಾಗೂ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಕೆ. ಸೈಲ್ ಚಾಲನೆ ನೀಡಿದರು.

₹4.34 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಈ ಯೋಜನೆಯು ಗಂಗಾವಳಿ ನದಿಯ ಹರಿವನ್ನು ಸುಗಮಗೊಳಿಸುವುದರ ಜೊತೆಗೆ ಸುತ್ತಮುತ್ತಲಿನ ಗ್ರಾಮಗಳು ಮತ್ತು ರಾಷ್ಟ್ರೀಯ ಹೆದ್ದಾರಿಗೆ ಉಂಟಾಗಬಹುದಾದ ಅಪಾಯವನ್ನು ತಡೆಯುವ ಉದ್ದೇಶ ಹೊಂದಿದೆ.

ಇದನ್ನೂ ಓದಿ:  ಮೇಕೆದಾಟು ಕಿಚ್ಚು: ವಿಜಯ್ ಆಗಮನಕ್ಕೂ ಮುನ್ನ ಕರವೇ ಕಾರ್ಯಕರ್ತರ ಬಂಧನ

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸತೀಶ್ ಕೆ. ಸೈಲ್, ಶಿರೂರು ಭೂಕುಸಿತದ ಬಳಿಕ ಗಂಗಾವಳಿ ನದಿಯಲ್ಲಿ ಮಣ್ಣಿನ ಕೃತಕ ದಿಬ್ಬ ನಿರ್ಮಾಣಗೊಂಡಿದ್ದು, ಇದರಿಂದ ಪಕ್ಕದ ಉಳುವರೆ ಗ್ರಾಮ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಭವಿಷ್ಯದಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇತ್ತು ಎಂದು ಹೇಳಿದರು.

ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಮೊದಲ ಹಂತದಲ್ಲಿ ₹2 ಕೋಟಿ ಅನುದಾನ ಮಂಜೂರಾಗಿದ್ದರೂ, ಕಾಮಗಾರಿಯ ತಾಂತ್ರಿಕ ಸಂಕೀರ್ಣತೆ ಹಾಗೂ ನದಿಯಲ್ಲಿನ ಮಣ್ಣಿನ ಪ್ರಮಾಣದ ಸ್ಪಷ್ಟ ಮಾಹಿತಿ ಕೊರತೆಯಿಂದ ನಾಲ್ಕು ಬಾರಿ ಟೆಂಡರ್ ಕರೆಯಲಾಗಿದ್ದರೂ ಯಾವುದೇ ಗುತ್ತಿಗೆದಾರರು ಭಾಗವಹಿಸಿರಲಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ:  ಬೃಹತ್ Diesel ಖರೀದಿಗೆ ಬ್ರೇಕ್: ಕೇಂದ್ರದಿಂದ ಮಹತ್ವದ ಆದೇಶ

ನದಿಯ ಆಳ ಮತ್ತು ಮಣ್ಣು ಎಷ್ಟು ಪ್ರಮಾಣದಲ್ಲಿ ಶೇಖರವಾಗಿದೆ ಎಂಬುದನ್ನು ವೈಜ್ಞಾನಿಕವಾಗಿ ತಿಳಿದುಕೊಳ್ಳಲು ಹೈಡ್ರೋಗ್ರಾಫಿಕ್ ಸರ್ವೆ ಅಗತ್ಯವಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಹೆಚ್ಚುವರಿಯಾಗಿ ₹2.34 ಕೋಟಿ ಅನುದಾನ ಬಿಡುಗಡೆ ಮಾಡಿಸಲಾಯಿತು. ಹೀಗೆ ಒಟ್ಟು ₹4.34 ಕೋಟಿ ವೆಚ್ಚದ ಯೋಜನೆಗೆ 4ಜಿ ವಿನಾಯಿತಿ ಪಡೆದು ‘ಅಬಿಷೇಯಾ ಓಶಿಯನ್ ಸರ್ವಿಸ್’ ಸಂಸ್ಥೆಗೆ ಕಾಮಗಾರಿ ವಹಿಸಲಾಗಿದೆ ಎಂದು ವಿವರಿಸಿದರು.

ಶಿರೂರು ದುರಂತದ ನೋವು ಇನ್ನೂ ಮಾಸಿಲ್ಲ : ಶಿರೂರು ಭೂಕುಸಿತ ಪ್ರಕರಣವನ್ನು ಸ್ಮರಿಸಿದ ಶಾಸಕ ಸೈಲ್, ಆ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದರು. ದುರಂತದ ಬಳಿಕ ಅಧಿಕಾರಿಗಳು, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ನೌಕಾದಳದ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ಸತತ 72 ದಿನಗಳ ಕಾಲ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಹೇಳಿದರು.

ಇದನ್ನೂ ಓದಿ:  ಮರಳಿನಲ್ಲಿ ಮೂಡಿದ ಭಾರತದ ಹೆಮ್ಮೆ: ಪರಿಸರ ಸಂದೇಶ ಹೊತ್ತ ಶಿಲ್ಪಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿ

ಈ ಕಾರ್ಯಾಚರಣೆಯ ವೇಳೆ ಕೇರಳ ಮೂಲದ ಅರ್ಜುನ್ ಅವರ ಮೃತದೇಹ ಪತ್ತೆಯಾಗಿದ್ದರೂ, ಸ್ಥಳೀಯ ಇಬ್ಬರ ಮೃತದೇಹಗಳು ಇನ್ನೂ ದೊರಕಿಲ್ಲ. ಆ ನೋವು ಇಂದಿಗೂ ಉಳಿದಿದೆ ಎಂದು ಭಾವುಕರಾದರು.

ಅಭಿವೃದ್ಧಿಗೆ ಆದ್ಯತೆ : ಜನರಿಂದ ಆಯ್ಕೆಯಾದ ಜನಪ್ರತಿನಿಧಿಗೆ ಜನರ ಸಂಕಷ್ಟಗಳ ಅರಿವು ಇರಬೇಕು. ಸಾರ್ವಜನಿಕ ಹಿತಾಸಕ್ತಿಯ ಕೆಲಸಗಳಿಗೆ ಟೀಕೆಗಿಂತ ಪ್ರೋತ್ಸಾಹ ಮತ್ತು ಸಹಕಾರ ಅಗತ್ಯವಾಗಿದೆ. ಕ್ಷೇತ್ರದ ಜನತೆ ನೀಡಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮುಂದಿನ ಎರಡು ವರ್ಷಗಳಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸತೀಶ್ ಸೈಲ್ ಹೇಳಿದರು.

ಇದನ್ನೂ ಓದಿ:  ಭಾರತದ ಶೂಟಿಂಗ್ ಕ್ರಾಂತಿಗೆ ಮುನ್ನುಡಿ ಬರೆದ ಜಸ್ಪಾಲ್ ರಾಣಾ ಇನ್ನಿಲ್ಲ

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ ನಾಯ್ಕ, ತಾಲೂಕು ಅಧ್ಯಕ್ಷ ಪಾಂಡುರಂಗ ಗೌಡ, ತಹಶೀಲ್ದಾರ್ ನಿಶ್ಚಲ್ ನರೋನ್ಹಾ, ತಾಲೂಕು ಪಂಚಾಯತ್ ಸದಸ್ಯ ರಾಮು ಗುನಗಿ, ಬಂದರು ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ರಾಥೋಡ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜಕುಮಾರ್ ಸೇರಿದಂತೆ ಹಲವಾರು ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.