SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಬೇಡ್ತಿ-ಅಘನಾಶಿನಿ ಯೋಜನೆ ವಿರುದ್ಧ ಶಿರಸೀಲಿ ಪತ್ರ ಚಳವಳಿ

ಬೇಡ್ತಿ-ಅಘನಾಶಿನಿ ಯೋಜನೆ ವಿರುದ್ಧ ಶಿರಸೀಲಿ ಪತ್ರ ಚಳವಳಿ

0
35

ಶಿರಸಿ: ಪರಿಸರ ವಿನಾಶಕಾರಿ ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ಪರಿಸರವಾದಿಗಳು ಸೋಮವಾರ ಶಿರಸಿಯಲ್ಲಿ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ಹಾಗೂ ಪತ್ರ ಚಳವಳಿ ನಡೆಸಿದರು.

ಸಾವಿರಾರು ಹೋರಾಟಗಾರರು ಮೆರವಣಿಗೆಯಲ್ಲಿ ತೆರಳಿ ಶಿರಸಿ ಉಪವಿಭಾಗಾಧಿಕಾರಿಯವರಿಗೆ ಹತ್ತು ಸಾವಿರಕ್ಕೂ ಹೆಚ್ಚು ಪತ್ರಗಳನ್ನು ಹಸ್ತಾಂತರಿಸಿದರು. ಪತ್ರ ಚಳವಳಿಯಲ್ಲಿ ಕಾಂಗ್ರೆಸ್ ಪಕ್ಷದವರೇ ಆದ ಶಾಸಕ ಭೀಮಣ್ಣ ನಾಯ್ಕ ಮುಂಚೂಣಿಯಲ್ಲಿ ನಿಂತು ಪರಿಸರ ವಿರೋಧಿಯಾದ ನದಿ ತಿರುವು ಯೋಜನೆಯನ್ನು ಕೈಬಿಡಬೇಕು, ನದಿ ತಿರುವುದು ಯೋಜನೆ ಕೈಬಿಟ್ಟಿದ್ದೇವೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೇಳುವವರೆಗೂ ಹೋರಾಟ ಮುಂದುವರಿಸಬೇಕು, ಗ್ರಾಮೀಣ ಜನರ ಜತೆ ನಗರದ ಜನತೆಯೂ ಹೋರಾಟಕ್ಕೆ ಬರಬೇಕು ಎಂದು ಕರೆ ಕೊಟ್ಟರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಭೇಟಿಯಾಗಿ ಹಾಗೂ ಸಂಸದರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಸಂಬಂಧಿಸಿದ ಸಚಿವರನ್ನು ಭೇಟಿಯಾಗಿ ಈ ಯೋಜನೆ ಕೈಬಿಡುವಂತೆ ಆಗ್ರಹಿಸಲು ಸಿದ್ಧನಿದ್ದೇನೆ ಎಂದು ಘೋಷಿಸಿದರು.

ಅಘನಾಶಿನಿ-ಬೇಡ್ತಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ಜಿಲ್ಲೆಯಲ್ಲಿ ನದಿ ತಿರುವಿನ ಭೂತ 25 ವರ್ಷಗಳಿಂದ ಬೆನ್ನು ಹಿಡಿದಿದೆ. ಅದನ್ನು ಓಡಿಸಬೇಕಾಗಿದೆ. ಪಶ್ಚಿಮ ಘಟ್ಟಕ್ಕೆ ಕಳಂಕ ಬಂದಿದೆ. ಶರಾವತಿ ಪಂಪ್ಡ್ ಸ್ಟೋರೇಜ್, ಸಿಗಂದೂರು ಬಳಿ ಅಣು ವಿದ್ಯುತ್ ಸ್ಥಾವರ ಘಟಕ ಸ್ಥಾಪನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಿದೆ. ನದಿ ತೀರದಲ್ಲಿ ವೃಕ್ಷಾರೋಪಣ ನಡೆಯುತ್ತಿದೆ. ಕಾನೂನು ಹೋರಾಟಕ್ಕೂ ಸಿದ್ಧರಾಗುತ್ತೇವೆಂದು ಎಚ್ಚರಿಸಿದರು.

ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಾವಿರಾರು ಜನರು ಸೇರಿದ್ದರು. ಬೇಡ್ತಿ-ವರದಾ ಹಾಗೂ ಅಘನಾಶಿನಿ-ವೇದಾವತಿ ನದಿ ತಿರುವು, ಶರಾವತಿ ಪಂಪ್ಡ್ ಸ್ಟೋರೆಜ್, ಸಾಗರದ ಅಣುಸ್ಥಾವರ ಯೋಜನೆ ಸ್ಥಗಿತಗೊಳಿಸಬೇಕು. ಅರಣ್ಯ ಸಂಪತ್ತು ವ್ಯಾಪಕವಾಗಿ ನಾಶವಾಗುತ್ತದೆ. ಅಸಂಖ್ಯ ಜಲಚರ ವಂಶಗಳು ಕಣ್ಮರೆಯಾಗುತ್ತವೆ. ಭೂಕುಸಿತದಿಂದ ಅಪಾಯಕ್ಕೊಳಗಾಗಿರುವ ಇಳಿಜಾರಾದ ಪ್ರದೇಶಗಳಲ್ಲಿ ಮತ್ತಷ್ಟು ಭೂಕುಸಿತಗಳು ಘಟಿಸಲಿವೆಯೆಂದೂ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆಂದು ಚಳವಳಿಯಲ್ಲಿ ಆಕ್ರೋಶ ವ್ಯಕ್ತವಾಯಿತು.