ಕರ್ನಾಟಕದ ಕರಾವಳಿಯತ್ತ ಆನಂದ್ ಮಹೀಂದ್ರಾ ಗಮನ:‘ಮಾಂತ್ರಿಕ ಭೂದೃಶ್ಯ’ ಎಂದ ಹೊನ್ನಾವರದ ಪೋಸ್ಟ್ ವೈರಲ್
ಹೊನ್ನಾವರ/ಬೆಂಗಳೂರು: ಭಾರತದ ಕಡಿಮೆ ಪರಿಚಿತವಾಗಿದ್ದರೂ ಅಪರೂಪದ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಪ್ರವಾಸಿ ತಾಣಗಳ ಬಗ್ಗೆ ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಖ್ಯಾತ ಉದ್ಯಮಿ, ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರಾ ಇದೀಗ ಕರ್ನಾಟಕದ ಕರಾವಳಿ ಭಾಗದತ್ತ ಗಮನ ಹರಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಹಿನ್ನೀರು, ಶರಾವತಿ ನದಿ ಹಾಗೂ ಕಾಂಡ್ಲಾ ವನಗಳ ಸೌಂದರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಅವರು, ಕೇರಳದ ಹಿನ್ನೀರಿನಷ್ಟೇ ಪ್ರಚಾರ ಮತ್ತು ಮಾನ್ಯತೆಗೆ ಈ ಪ್ರದೇಶ ಅರ್ಹವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಂಚ ಗ್ಯಾರಂಟಿ ನಿಲ್ಲಲ್ಲ: ವಿಪಕ್ಷಗಳ ಆರೋಪಕ್ಕೆ ಮಾಜಿ CM ತಿರುಗೇಟು
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಹೊನ್ನಾವರದ ಸುಂದರ ದೃಶ್ಯಗಳನ್ನು ಹಂಚಿಕೊಂಡಿರುವ ಆನಂದ್ ಮಹೀಂದ್ರಾ, ಭಾರತದಲ್ಲಿ ಹಲವು ಅದ್ಭುತ ಪ್ರವಾಸಿ ತಾಣಗಳು ಜನರ ಗಮನಕ್ಕೆ ಬಾರದೆಯೇ ಉಳಿದಿವೆ ಎಂದು ಉಲ್ಲೇಖಿಸಿದ್ದಾರೆ. ಅಂತಹ ಸ್ಥಳಗಳಲ್ಲಿ ಹೊನ್ನಾವರವೂ ಒಂದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಮಾಂತ್ರಿಕ ಭೂದೃಶ್ಯ’ ಎಂದ ಮಹೀಂದ್ರಾ : ತಮ್ಮ ಪೋಸ್ಟ್‌ನಲ್ಲಿ ಅವರು, “ನಾವು ಯಾವಾಗಲೂ ಕೇರಳದ ಹಿನ್ನೀರನ್ನು ಸಂಭ್ರಮಿಸುತ್ತೇವೆ. ಆದರೆ ಕರ್ನಾಟಕದ ಕರಾವಳಿಯಲ್ಲಿ ಕೇರಳದಷ್ಟೇ ಗಮನ ಸೆಳೆಯಲು ಅರ್ಹವಾದ ಒಂದು ರಹಸ್ಯ ರತ್ನವಿದೆ. ಜೋಗ್ ಜಲಪಾತದಲ್ಲಿ ಭೋರ್ಗರೆದು ಹರಿಯುವ ಅದೇ ಶರಾವತಿ ನದಿ ಕೊನೆಗೆ ಹೊನ್ನಾವರದಲ್ಲಿ ಅತ್ಯಂತ ಶಾಂತವಾಗಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಹೊನ್ನಾವರ ಒಂದು ಮಾಂತ್ರಿಕ ಭೂದೃಶ್ಯವಾಗಿದೆ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮದುವೆ ಹೆಸರಿನಲ್ಲಿ ವಂಚನೆ? ಕಾಂಗ್ರೆಸ್ ನಾಯಕಿ ವಿರುದ್ಧ ಆರೋಪ
ಈ ಹೇಳಿಕೆಯ ಮೂಲಕ ಕರ್ನಾಟಕದ ಕರಾವಳಿ ಭಾಗದ ಅಪರೂಪದ ಪ್ರಕೃತಿ ಸೊಬಗನ್ನು ರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಗಮನ ಸೆಳೆಯುವಂತೆ ಮಾಡಿದ್ದಾರೆ.
ಕಾಂಡ್ಲಾ ವನಗಳ ಪರಿಸರ ಮಹತ್ವ : ಪ್ರಕೃತಿ ಸೌಂದರ್ಯದ ಜೊತೆಗೆ ಹೊನ್ನಾವರದ ಪರಿಸರ ವ್ಯವಸ್ಥೆಯ ಬಗ್ಗೆಯೂ ಆನಂದ್ ಮಹೀಂದ್ರಾ ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ. ಅಲ್ಲಿನ ಕಾಂಡ್ಲಾ ವನಗಳು, ಅಂಕುಡೊಂಕಾದ ಜಲಮಾರ್ಗಗಳು ಮತ್ತು ಕನ್ನಡಿಯಂತೆ ಹೊಳೆಯುವ ಹಿನ್ನೀರು ಪ್ರದೇಶಗಳು ಪ್ರಕೃತಿ ಪ್ರಿಯರನ್ನು ಸೆಳೆಯುವಂತಹ ವೈಶಿಷ್ಟ್ಯ ಹೊಂದಿವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಾಹಿತ್ಯ ಪರಂಪರೆಯ ಮೌನ ಶಕ್ತಿ ಇಂದಿರಾ ಲಂಕೇಶ್ ಇನ್ನಿಲ್ಲ
ಕಾಂಡ್ಲಾ ವನಗಳು ಕೇವಲ ಪ್ರವಾಸಿ ಆಕರ್ಷಣೆ ಮಾತ್ರವಲ್ಲ, ಕರಾವಳಿ ಪ್ರದೇಶಗಳನ್ನು ರಕ್ಷಿಸುವ ಪ್ರಕೃತಿಯ ಅತ್ಯಂತ ಪರಿಣಾಮಕಾರಿ ವ್ಯವಸ್ಥೆಗಳಲ್ಲಿ ಒಂದಾಗಿದೆ ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ. ಹೀಗಾಗಿ ಹೊನ್ನಾವರದ ಸೌಂದರ್ಯ ಮತ್ತು ಪರಿಸರ ಮಹತ್ವ ಎರಡೂ ಸಮಾನವಾಗಿ ಗಮನಾರ್ಹವಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ : ಆನಂದ್ ಮಹೀಂದ್ರಾ ಅವರ ಪೋಸ್ಟ್‌ಗೆ ಸಾಮಾಜಿಕ ಜಾಲತಾಣ ಬಳಕೆದಾರರಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ಹೊನ್ನಾವರ ಹಾಗೂ ಶರಾವತಿ ನದಿಯ ಸೌಂದರ್ಯವನ್ನು ಮೆಚ್ಚಿಕೊಂಡಿದ್ದು, ಈ ಪ್ರದೇಶಕ್ಕೆ ಭೇಟಿ ನೀಡಿದ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಶಾಸಕ ಇಕ್ಬಾಲ್ ಹುಸೇನ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು
ಪೋಸ್ಟ್‌ಗೆ ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬರು, “ನಾನು ಕೆಲವು ವರ್ಷಗಳ ಹಿಂದೆ ಶರಾವತಿ ಮತ್ತು ಹೊನ್ನಾವರಕ್ಕೆ ಭೇಟಿ ನೀಡಿದ್ದೆ. ಅಲ್ಲಿನ ಸೌಂದರ್ಯ ನನ್ನನ್ನು ಬೆರಗುಗೊಳಿಸಿತ್ತು. ನಾನು ತೆಗೆದ ಚಿತ್ರ ಇಂದಿಗೂ ನನ್ನ ನೆನಪಿನಲ್ಲಿ ಉಳಿದಿದೆ” ಎಂದು ಬರೆದು, ತಾವು ಸೆರೆಹಿಡಿದಿದ್ದ ಸುಂದರ ದೃಶ್ಯವೊಂದನ್ನು ಹಂಚಿಕೊಂಡಿದ್ದಾರೆ.
ಕರ್ನಾಟಕ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ : ದೇಶದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿರುವ ಆನಂದ್ ಮಹೀಂದ್ರಾ ಅವರಂತಹ ಪ್ರಭಾವಿ ವ್ಯಕ್ತಿಗಳ ಮೆಚ್ಚುಗೆ ಕರ್ನಾಟಕದ ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ ನೀಡುವ ಸಾಧ್ಯತೆ ಇದೆ. ವಿಶೇಷವಾಗಿ ಹೊನ್ನಾವರ, ಶರಾವತಿ ಹಿನ್ನೀರು, ಕಾಂಡ್ಲಾ ವನಗಳು ಹಾಗೂ ಸುತ್ತಮುತ್ತಲಿನ ಪರಿಸರ ಪ್ರವಾಸೋದ್ಯಮ ತಾಣಗಳು ದೇಶದ ಪ್ರವಾಸಿಗರ ಗಮನ ಸೆಳೆಯುವ ಅವಕಾಶ ಹೆಚ್ಚಾಗಿದೆ.
ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ಶಾಕ್: ಹಲ್ಲಿ ಬಿದ್ದ ನೀರು ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ
ಪ್ರಕೃತಿ ಸೌಂದರ್ಯ, ಪರಿಸರ ಸಂರಕ್ಷಣೆ ಮತ್ತು ಶಾಂತ ವಾತಾವರಣದ ಅಪರೂಪದ ಸಂಗಮವಾಗಿರುವ ಹೊನ್ನಾವರವನ್ನು ‘ಕರ್ನಾಟಕದ ರಹಸ್ಯ ರತ್ನ’ ಎಂದು ಆನಂದ್ ಮಹೀಂದ್ರಾ ಬಣ್ಣಿಸಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.






















