SK Home Ad
Home ನಮ್ಮ ಜಿಲ್ಲೆ ಕೊಪ್ಪಳ ಸರ್ಕಾರಿ ಕೆಲಸದ ಕನಸು ಅಪಘಾತದಲ್ಲಿ ಭಗ್ನ: ಇಬ್ಬರು ಯುವಕರ ದುರ್ಮರಣ

ಸರ್ಕಾರಿ ಕೆಲಸದ ಕನಸು ಅಪಘಾತದಲ್ಲಿ ಭಗ್ನ: ಇಬ್ಬರು ಯುವಕರ ದುರ್ಮರಣ

0
2

ಕೊಪ್ಪಳ: ಸರ್ಕಾರಿ ಉದ್ಯೋಗ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಕನಸು ಹೊತ್ತು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ತೆರಳುತ್ತಿದ್ದ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಕುಷ್ಟಗಿ ತಾಲೂಕಿನ ಕನಕಪ್ಪ ಕ್ರಾಸ್ ಬಳಿ ಬೈಕ್‌ಗೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಹಾವೇರಿ ತಾಲೂಕಿನ ಮರೋಳ ಗ್ರಾಮದ ಚನ್ನಬಸಪ್ಪ ಶಂಕರರೆಡ್ಡಿ ಬಿಳಿಕಟ್ಟಿ (25) ಹಾಗೂ ಅಭಿಷೇಕ್‌ರೆಡ್ಡಿ ರಾಮರೆಡ್ಡಿ ಮಗಡಿ (25) ಮೃತಪಟ್ಟವರು. ಶಿವರೆಡ್ಡಿ ಈರಣ್ಣ ಹಾಜಿಮನಿ (24) ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಗದಗ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂವರು ಒಂದೇ ಬೈಕ್‌ನಲ್ಲಿ ರಾಯಚೂರಿಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಚನ್ನಬಸಪ್ಪ ಹಾಗೂ ಅಭಿಷೇಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸರ್ಕಾರಿ ನೌಕರಿ ಪಡೆದು ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದ ಇಬ್ಬರು ಯುವಕರ ದುರಂತ ಅಂತ್ಯದಿಂದ ಮರೋಳ ಗ್ರಾಮದಲ್ಲಿ ಶೋಕ ಆವರಿಸಿದೆ. ಕುಟುಂಬಸ್ಥರು ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದೆ.