SK Home Ad
Home ನಮ್ಮ ಜಿಲ್ಲೆ ಹಾವೇರಿ ವಿಎಒ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಮತ್ತೊಂದು ಸ್ಫೋಟಕ ತಿರುವು!

ವಿಎಒ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಮತ್ತೊಂದು ಸ್ಫೋಟಕ ತಿರುವು!

0
4
ಶಂಕರ್ ಬನ್ನೂರು ಪರೀಕ್ಷಾ ಕೊಠಡಿಗೆ ಬಂದೇ ಇಲ್ಲವೇ? ಸಹಪರೀಕ್ಷಾರ್ಥಿಯ ಆರೋಪಕ್ಕೆ ಹಾವೇರಿ ಎಸ್‌ಪಿ ಸ್ಪಷ್ಟನೆ

ಶಂಕರ್ ಬನ್ನೂರು ಪರೀಕ್ಷಾ ಕೇಂದ್ರಕ್ಕೆ ಬಂದೇ ಇರಲಿಲ್ಲ ಎಂದ ಸಹಪರೀಕ್ಷಾರ್ಥಿ – ಸಿಸಿಟಿವಿ ದೃಶ್ಯ ಬಿಡುಗಡೆಗೆ ಸವಾಲು

ಹಾವೇರಿ: ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿರುವ ವಿಎಒ ಪರೀಕ್ಷಾ ಅಕ್ರಮ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಮೊಬೈಲ್ ಬಳಸಿ ಪರೀಕ್ಷೆ ಬರೆದ ಆರೋಪ ಎದುರಿಸುತ್ತಿರುವ ಶಂಕರ್ ಬನ್ನೂರು ಅಂದು ಪರೀಕ್ಷಾ ಕೇಂದ್ರಕ್ಕೆ ಬಂದೇ ಇರಲಿಲ್ಲ ಎಂದು ಸಹಪರೀಕ್ಷಾರ್ಥಿಯೊಬ್ಬರು ಹೇಳಿಕೆ ನೀಡಿರುವುದು ಪ್ರಕರಣದಲ್ಲಿ ಹೊಸ ಸಂಚಲನ ಮೂಡಿಸಿದೆ.

ಒಂದೇ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದೇನೆ ಎನ್ನುವ ಸತೀಶ್ ಲಮಾಣಿ ಎಂಬ ಯುವಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಡುಗಡೆ ಮಾಡಿ ಈ ಗಂಭೀರ ಆರೋಪ ಮಾಡಿದ್ದಾರೆ. ಶಂಕರ್ ಬನ್ನೂರು ಹೆಸರಿನಲ್ಲಿ ನಿಗದಿಯಾಗಿದ್ದ ರಿಜಿಸ್ಟರ್ ಸಂಖ್ಯೆಯ ಆಸನ ಪರೀಕ್ಷಾ ಕೊಠಡಿಯಲ್ಲಿ ಖಾಲಿ ಇತ್ತು. ಅಂದು ಶಂಕರ್ ಬನ್ನೂರು ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರೆ, ಅದಕ್ಕೆ ಸಾಕ್ಷಿಯಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನೀಡಿರುವ ಮಾಹಿತಿಯಲ್ಲಿ ಶಂಕರ್ ಬನ್ನೂರು ಪರೀಕ್ಷಾ ವೇಳೆ ಮೊಬೈಲ್ ಬಳಸಿ ಅಕ್ರಮವಾಗಿ ಉತ್ತರ ಬರೆದಿದ್ದಾರೆ ಎಂಬ ಆರೋಪವಿದೆ. ಜಿಲ್ಲಾಡಳಿತದ ಮಾಹಿತಿಯಲ್ಲಿಯೂ ಇದೇ ಅಂಶ ಉಲ್ಲೇಖವಾಗಿದೆ ಎನ್ನಲಾಗಿದೆ. ಆದರೆ, ಇದೀಗ ಅದೇ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದಾಗಿ ಹೇಳುತ್ತಿರುವ ಅಭ್ಯರ್ಥಿಯೇ ಶಂಕರ್ ಬನ್ನೂರು ಅಂದು ಕೊಠಡಿಯಲ್ಲಿ ಇರಲಿಲ್ಲ ಎಂದು ಹೇಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮೊಬೈಲ್ ಬಳಸಿ ಪರೀಕ್ಷೆ ಬರೆದಿದ್ದು ಯಾರು? : ಸಹಪರೀಕ್ಷಾರ್ಥಿಯ ಹೇಳಿಕೆ ನಿಜವೇ ಆಗಿದ್ದರೆ, ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್ ಬಳಸಿ ಉತ್ತರ ಬರೆದ ವ್ಯಕ್ತಿ ಯಾರು? ಶಂಕರ್ ಬನ್ನೂರು ಹೆಸರಿನಲ್ಲಿ ಬೇರೊಬ್ಬರು ಪರೀಕ್ಷೆ ಬರೆದಿದ್ದರೇ? ಅಥವಾ ಹಾಜರಾತಿ ದಾಖಲೆ ಹಾಗೂ ಸಿಸಿಟಿವಿ ದೃಶ್ಯಾವಳಿಗಳಲ್ಲಿ ವ್ಯತ್ಯಾಸವಿದೆಯೇ? ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಈ ಗೊಂದಲಕ್ಕೆ ತೆರೆ ಎಳೆಯಲು ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಾವಳಿ, ಅಭ್ಯರ್ಥಿಗಳ ಹಾಜರಾತಿ ಪಟ್ಟಿ, ಆಸನ ವ್ಯವಸ್ಥೆಯ ದಾಖಲೆ ಹಾಗೂ ಪರೀಕ್ಷಾ ಮೇಲ್ವಿಚಾರಕರ ಹೇಳಿಕೆಗಳನ್ನು ಸಮಗ್ರವಾಗಿ ಪರಿಶೀಲಿಸುವ ಅಗತ್ಯವಿದೆ.

ಒಟ್ಟಾರೆ, ಕೆಇಎ ಮಾಹಿತಿ ಮತ್ತು ಸಹಪರೀಕ್ಷಾರ್ಥಿಯ ಹೇಳಿಕೆ ನಡುವೆ ಕಂಡುಬಂದಿರುವ ವ್ಯತ್ಯಾಸ ಪ್ರಕರಣದ ತನಿಖೆಗೆ ಹೊಸ ಆಯಾಮ ನೀಡಿದೆ. ಸಂಬಂಧಪಟ್ಟ ಅಧಿಕಾರಿಗಳು ಎಲ್ಲ ದಾಖಲೆಗಳನ್ನು ಪರಿಶೀಲಿಸಿ, ಸತ್ಯಾಂಶವನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಬೇಕೆಂಬ ಒತ್ತಾಯ ಕೇಳಿಬಂದಿದೆ.