SK Home Ad
Home ನಮ್ಮ ಜಿಲ್ಲೆ ವಿಜಯನಗರ ತಲೆ ಮೇಲೆ ರುಬ್ಬುಗುಂಡು ಎತ್ತಿಹಾಕಿ ಯುವಕನ ಬರ್ಬರ ಹತ್ಯೆ

ತಲೆ ಮೇಲೆ ರುಬ್ಬುಗುಂಡು ಎತ್ತಿಹಾಕಿ ಯುವಕನ ಬರ್ಬರ ಹತ್ಯೆ

0
24

ವಿಜಯನಗರ: ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ತಲೆಯ ಹಿಂಭಾಗಕ್ಕೆ ರುಬ್ಬುಗುಂಡು ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೊಸಪೇಟೆ ನಗರದ ಸಿದ್ದಲಿಂಗಪ್ಪ ಚೌಕಿ 4ನೇ ಕ್ರಾಸ್‌ನ ಎಲ್ಲಮ್ಮ ದೇವಸ್ಥಾನದ ಬಳಿ ತಡರಾತ್ರಿ ನಡೆದಿದೆ.

ಕಿರಣ್ ಕುಮಾರ್ ಅಲಿಯಾಸ್ ಚುಮ್ಮಿ (25) ಕೊಲೆಯಾದ ಯುವಕ. ಆನಂದ ಅಲಿಯಾಸ್ ಕರಿಯ (30) ಕೊಲೆ ಮಾಡಿರುವ ಆರೋಪಿ ಎಂದು ಗುರುತಿಸಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಆರೋಪಿ ರುಬ್ಬುಗುಂಡು ಕಲ್ಲಿನಿಂದ ಕಿರಣ್ ಕುಮಾರ್‌ನ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಇನ್ನು ಕೊಲೆಯಾದ ಕಿರಣ್ ಕುಮಾರ್ ಹಾಗೂ ಕೊಲೆ ಆರೋಪಿಯಾದ ಆನಂದ ಇಬ್ಬರೂ MOB (ಹಳೆಯ ಅಪರಾಧ ಹಿನ್ನೆಲೆ ಹೊಂದಿರುವವರು) ಎಂದು ತಿಳಿದುಬಂದಿದೆ. ಇಬ್ಬರ ವಿರುದ್ಧವೂ ಈ ಹಿಂದೆ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಹಾಗೂ ಹೊಸಪೇಟೆ ಡಿವೈಎಸ್ಪಿ ಮುರಳೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಪಿಐಗಳಾದ ರಾಜೇಶ್ ಲಮಾಣಿ, ಹುಲುಗಪ್ಪ, ರಾಜೇಶ್ ಭಟಗುರ್ಕಿ ಹಾಗೂ ಸೋಮ್ಲಾನಾಯ್ಕ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದು ತನಿಖೆಗೆ ಸಹಕರಿಸಿದ್ದಾರೆ.

ಹತ್ಯೆ ಪ್ರಕರಣ ದಾಖಲಿಸಿಕೊಂಡಿರುವ ಹೊಸಪೇಟೆ ಪಟ್ಟಣ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿ ಆನಂದ ಅಲಿಯಾಸ್ ಕರಿಯನ ಪತ್ತೆಗೆ ಬಲೆ ಬೀಸಿದ್ದಾರೆ. ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.