ದಾವಣಗೆರೆ: ಹಗಲು-ರಾತ್ರಿ ಎನ್ನದೆ ಹೊಲ, ಗದ್ದೆ, ತೋಟ ಹಾಗೂ ತೋಟದ ಮನೆಗಳ ಬಳಿ ಚಿರತೆ ಕಾಣಿಸಿಕೊಳ್ಳುತ್ತಿರುವುದು ತಾಲೂಕಿನ ಆನಗೋಡು ಮತ್ತು ಸುತ್ತಮುತ್ತಲಿನ ಗ್ರಾಮಗಳ ರೈತರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ.
ಕಳೆದ ಕೆಲವು ದಿನಗಳಿಂದ ಆನಗೋಡು ಸುತ್ತಮುತ್ತಲಿನ ಹೊಲ, ಗದ್ದೆ, ತೋಟದ ಮನೆಗಳು ಹಾಗೂ ಗ್ರಾಮಗಳ ಸಮೀಪ ಚಿರತೆ ಸಂಚರಿಸುತ್ತಿರುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಇದೀಗ ಅ. 8ರ ತಡರಾತ್ರಿ ತೋಟದ ಮನೆಯೊಂದರ ಗೇಟ್ ಬಳಿ ಬಂದ ಚಿರತೆ, ಗೇಟ್ ಹಾರಿ ಮತ್ತೊಂದು ತೋಟದತ್ತ ಸಾಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ಸ್ಥಳೀಯರಲ್ಲಿ ಭೀತಿ ಹೆಚ್ಚಿಸಿದೆ.
ಕತ್ತಲ ರಾತ್ರಿಯಲ್ಲಿ ಆಹಾರ ಅರಸಿಕೊಂಡು ಬಂದಿರುವಂತೆ ಕಂಡುಬರುವ ಚಿರತೆ, ತೋಟದ ಮನೆಯ ಗೇಟ್ ಬಳಿ ಮುಂದೆ ಸಾಗಲು ಪ್ರಯತ್ನಿಸಿದೆ. ಅಲ್ಲಿ ಬೇಲಿ ಅಡ್ಡಿಯಾಗಿದ್ದರಿಂದ ಕ್ಷಣಾರ್ಧದಲ್ಲಿ ಗೇಟ್ ಮೇಲಿನಿಂದ ಜಿಗಿದು ಪಕ್ಕದ ತೋಟದತ್ತ ತೆರಳಿದೆ. ಚಿರತೆಯ ಈ ಚಲನವಲನ ತೋಟದ ಮನೆಯವರಷ್ಟೇ ಅಲ್ಲದೆ ಸುತ್ತಮುತ್ತಲಿನ ರೈತರ ನಿದ್ದೆಗೆಡಿಸಿದೆ.
ಇನ್ನೊಂದೆಡೆ, ಹಾಡಹಗಲೇ ಚಿರತೆಯೊಂದು ತೋಟದ ಬದಿಯಲ್ಲಿ ಸಾಗುತ್ತಿರುವ ದೃಶ್ಯವನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಕಾರಿನ ಸದ್ದು ಹಾಗೂ ಜನರ ಧ್ವನಿ ಕೇಳುತ್ತಿದ್ದಂತೆ ಮುಂದೆ ಸಾಗುತ್ತಿದ್ದ ಚಿರತೆ ಏಕಾಏಕಿ ನಿಂತು, ಬಳಿಕ ಬಂದ ದಾರಿಯಲ್ಲೇ ವೇಗವಾಗಿ ಓಡಿಹೋಗಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.
ಈ ಎರಡೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆನಗೋಡು, ಹೆಬ್ಬಾಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರ ಮೊಬೈಲ್‌ಗಳಲ್ಲೂ ವ್ಯಾಪಕವಾಗಿ ಹಂಚಿಕೆಯಾಗುತ್ತಿವೆ. ಇದರಿಂದ ರಾತ್ರಿ ವೇಳೆ ಹೊಲಗಳಿಗೆ ನೀರು ಹಾಯಿಸಲು ತೆರಳುವ ರೈತರು ಮಾತ್ರವಲ್ಲದೆ, ಹಗಲಿನಲ್ಲಿ ಕೃಷಿ ಚಟುವಟಿಕೆಗಳಿಗೆ ಹೋಗುವವರೂ ಆತಂಕಕ್ಕೊಳಗಾಗಿದ್ದಾರೆ. ದನ, ಕರು ಹಾಗೂ ಎಮ್ಮೆಗಳನ್ನು ಮೇಯಿಸಲು ತೆರಳುವವರಲ್ಲಿಯೂ ಭಯ ಮನೆಮಾಡಿದೆ.
ಹಿಂದೆಯೂ ಹೆದ್ದಾರಿಯಲ್ಲಿ ಚಿರತೆ ಪತ್ತೆ: ಕೆಲವು ದಿನಗಳ ಹಿಂದಷ್ಟೇ ಆನಗೋಡು ಸಮೀಪದ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಚಿರತೆಯೊಂದು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದಿತ್ತು. ಗಾಯಗೊಂಡ ಚಿರತೆ ಸರಿಯಾಗಿ ನಿಲ್ಲಲಾರದೆ, ಓಡಲಾರದೆ ಹೆದ್ದಾರಿಯ ಪಕ್ಕದ ಸರ್ವೀಸ್ ರಸ್ತೆಯ ಮೋರಿಯ ಬಳಿ ನೋವಿನಿಂದ ನರಳುತ್ತಿತ್ತು. ಇದನ್ನು ಗಮನಿಸಿದ ದಾರಿಹೋಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಚಿರತೆಯನ್ನು ಸೆರೆಹಿಡಿಯುವ ಕಾರ್ಯಾಚರಣೆ ನಡೆಸಿದ ವೇಳೆ ಅರಣ್ಯ ರಕ್ಷಕನ ಮೇಲೂ ಚಿರತೆ ದಾಳಿ ಮಾಡಿತ್ತು. ಬಳಿಕ ಅದನ್ನು ಸೆರೆಹಿಡಿದು ಚಿಕಿತ್ಸೆ ನೀಡಲಾಗಿತ್ತು.
ಇದೀಗ ಅದೇ ಆನಗೋಡು ಭಾಗದಲ್ಲಿ ಮತ್ತೊಂದು ದಷ್ಟಪುಷ್ಟ ಚಿರತೆ ಕಾಣಿಸಿಕೊಂಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹೆದ್ದಾರಿಯಲ್ಲಿ ಗಾಯಗೊಂಡು ಸೆರೆಯಾದ ಚಿರತೆಯೇ ಮತ್ತೆ ಈ ಭಾಗದಲ್ಲಿ ಸಂಚರಿಸುತ್ತಿದೆಯೇ ಅಥವಾ ವಿಡಿಯೊಗಳಲ್ಲಿ ಕಾಣಿಸಿಕೊಂಡಿರುವುದು ಬೇರೆ ಚಿರತೆಯೇ ಎಂಬ ಅನುಮಾನ ಗ್ರಾಮಸ್ಥರನ್ನು ಕಾಡುತ್ತಿದೆ. ಆದರೆ, ಈ ಬಗ್ಗೆ ಅರಣ್ಯ ಇಲಾಖೆ ಪರಿಶೀಲನೆ ನಡೆಸಿದ ಬಳಿಕವಷ್ಟೇ ಸ್ಪಷ್ಟತೆ ಸಿಗಬೇಕಿದೆ.
ಚಿರತೆ ಭೀತಿಯಿಂದ ರೈತರು ಹೊಲ, ಗದ್ದೆ ಹಾಗೂ ತೋಟಗಳಿಗೆ ತೆರಳಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗುವುದರ ಜತೆಗೆ ಜಾನುವಾರುಗಳ ಸುರಕ್ಷತೆಯ ಬಗ್ಗೆಯೂ ಆತಂಕ ವ್ಯಕ್ತವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿರತೆಯ ಚಲನವಲನ ಪತ್ತೆಹಚ್ಚಬೇಕು. ಅಗತ್ಯ ಕ್ರಮ ಕೈಗೊಂಡು ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿಯುವ ಮೂಲಕ ಗ್ರಾಮಸ್ಥರ ಭಯ ನಿವಾರಿಸಬೇಕು ಎಂದು ಆನಗೋಡು ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಒತ್ತಾಯಿಸಿದ್ದಾರೆ.






















