ಆಯಿ ಎಂದ ನಾನಾ… ಬಾಳು ಮಗಾ ಎಂದ ಗಂಗಜ್ಜಿ…
ಹುಬ್ಬಳ್ಳಿ: ಗಡಸು ಧ್ವನಿ, ಖಡಕ್ ಮಾತಿನ ನಾನಾ ಪಾಟೇಕರ್ ಆ ದಿನ ವೇದಿಕೆಯ ಮೇಲೆ ಮಗುವಾದ ಕ್ಷಣ ಅದು.
2006 ರ ಮಾರ್ಚ್ 5 ರಂದು ಇಲ್ಲಿನ ದೇಶಪಾಂಡೆನಗರದ ಪಂಡಿತ ಸವಾಯಿ ಗಂಧರ್ವ ಸಭಾಭವನದಲ್ಲಿ ನಡೆದ ಡಾ.ಗಂಗೂಬಾಯಿ ಹಾನಗಲ್ ಅವರ 94 ನೇ ಜನ್ಮದಿನ ಹಾಗೂ ಅವರ 75 ನೇ ವರ್ಷದ ರಂಗ ಪ್ರದರ್ಶನದ ಸಾಧನೆಯ ಅಂಗವಾಗಿ ಹಮ್ಮಿಕೊಂಡ ವಿಶೇಷ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ನಾನಾ ಪಾಟೇಕರ್ ಪಾಲ್ಗೊಂಡಿದ್ದರು.
ಎರಡು ದಶಕಗಳ ಹಿಂದೆ ನಾನಾ ಪಾಟೇಕರ್ ಅವರು ಚಲನ ಚಿತ್ರ ರಂಗದಲ್ಲಿ, ರಂಗ ಕಲೆಯಲ್ಲಿ ಉತ್ತುಂಗದಲ್ಲಿ ದಿನಗಳು. ನಾನಾ ಹುಬ್ಬಳ್ಳಿಗೆ ಬರುತ್ತಿದ್ದಾರೆ ಎಂಬ ವಿಷಯ ತಿಳಿದೇ ಅವರ ಅಸಂಖ್ಯ ಅಭಿಮಾನಿಗಳು ಬಂದಿದ್ದರು. ಒಂದು ಕಡೆ ಗಂಗಜ್ಜಿಯವರ ( ಡಾ. ಗಂಗೂಬಾಯಿ ಹಾನಗಲ್ ) ಅಭಿಮಾನಿಗಳ ಬಳಗ ಒಂದೆಡೆಯಾದರೆ ಮತ್ತೊಂದೆಡೆ ನಾನಾಜಿ ಅವರ ಅಭಿಮಾನಿಗಳು. ಅಭಿಮಾನಿಗಳ ಅಪಾರ ಪ್ರೀತಿಗೆ, ಗಂಗಜ್ಜಿಯ ಆಶೀರ್ವಾದದಿಂದ ನಾನಾಜಿ ಭಾವ ಪರವಶರಾಗಿದ್ದರು.
“ಆಯಿ, ನಿಮ್ಮ 75 ವರ್ಷದ ಸಾಧನೆ ಮುಂದೆ ನಾವೆಲ್ಲ ಚಿಕ್ಕವರು. ನಿಮ್ಮ ಪಕ್ಕದಲ್ಲಿ ಕೂರುವುದೇ ನನಗೆ ಸಿಕ್ಕ ದೊಡ್ಡ ಪ್ರಶಸ್ತಿ ಎಂದಿದ್ದರಲ್ಲದೇ, ಗಂಗಜ್ಜಿಯ ಪಾದಗಳಿಗೆ ಎರಗಿ ನಮಸ್ಕರಿಸಿದ್ದರು.
ನಾನಾ ಅವರ ಮಾತು ಕೇಳಿ, ಅವರು ತಮ್ಮ ಪಾದಗಳಿಗೆ ನಮಸ್ಕರಿಸಿದ ಕ್ಷಣದಿಂದ ಅಷ್ಟೇ ಭಾವುಕರಾಗಿದ್ದ ಗಂಗಜ್ಜಿ ಅವರು ಕಣ್ಣಾಲೆಯ ಆನಂದ ಬಾಷ್ಪವನ್ನು ಸೀರೆಯ ಸೆರಗಿನಿಂದ ಒರೆಸಿಕೊಂಡಿದ್ದರು.
ತಮ್ಮ ನಡುಗುವ ಕೈಗಳಿಂದ ಅವರ ತಲೆಯ ಮೇಲೆ ನೆವರಿಸಿ ಆಶೀರ್ವದಿಸಿದ್ದರು ಗಂಗಜ್ಜಿ. ವಯಸ್ಸಿನ ಕಾರಣದಿಂದ ನಡೆಯಲು ಕಷ್ಟಪಡುತ್ತಿದ್ದ ಗಂಗೂಬಾಯಿ ಅವರನ್ನು ಸ್ವತಃ ಕೈಹಿಡಿದು ವೇದಿಕೆಗೆ ಕರೆತಂದಿದ್ದರು ನಾನಾ ಪಾಟೇಕರ್.
ಹಾಗೆಯೇ ಮತ್ತೆ ಕೆಳಗೆ ಇಳಿಸುವವರೆಗೂ ನಾನಾ ಅವರೇ ಜೊತೆಯಲ್ಲಿದ್ದರು. ಆ ದೃಶ್ಯ ನೋಡಿದ ನೂರಾರು ಪ್ರೇಕ್ಷಕರ ಕಣ್ಣುಗಳು ತೇವವಾಗಿದ್ದವು.
ಆ ದಿನ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಕುಳಿತು ಸಹಜ ಪ್ರೇಕ್ಷಕರಾಗಿ ಪ್ರೇಕ್ಷಕರ ಸಾಲಿನಲ್ಲಿ ಕುಳಿತು ವಿವಿಧ ಸಂಗೀತ ಕಲಾವಿದರ ಸಂಗೀತ ಆಸ್ವಾದಿಸಿದ್ದರು.
ಧಾರವಾಡದ ಮಣ್ಣಿನ ಮಗಳು ಗಂಗೂಬಾಯಿ ಮತ್ತು ಮಹಾರಾಷ್ಟ್ರದ ಮಣ್ಣಿನ ಮಗ ನಾನಾ – ಇಬ್ಬರ ನಡುವಿನ ಈ ಬಂಧ ರಕ್ತದ್ದಲ್ಲ, ಕಲೆಯ ತಾಯಿ-ಮಗನ ಬಂಧ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಿರಿಯರು , ಸಂಗೀತ ವಿದ್ವಾಂಸರು ಬಣ್ಣಿಸಿದ್ದರು.





















