ಚಿಕ್ಕಮಗಳೂರು: ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಈಜಲು ಕೆರೆಗೆ ತೆರಳಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟ ಘಟನೆ ಚಿಕ್ಕಮಗಳೂರು ತಾಲೂಕಿನ ಮರ್ಲೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಮರ್ಲೆ ಗ್ರಾಮದ ಚಿಕ್ಕ ಕೆರೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೃತರನ್ನು ತರುಣ್ (12), ಭುವನ್ (12) ಹಾಗೂ ಲಿಖಿತ್ (12) ಎಂದು ಗುರುತಿಸಲಾಗಿದೆ. ಮೂವರೂ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.
ಶಾಲೆಗೆ ರಜೆ ಇದ್ದ ಕಾರಣ ಮೂವರು ಗೆಳೆಯರು ಒಟ್ಟಾಗಿ ಗ್ರಾಮದ ಚಿಕ್ಕ ಕೆರೆಗೆ ಈಜಲು ತೆರಳಿದ್ದರು. ಈ ವೇಳೆ ಕೆರೆಯಲ್ಲಿದ್ದ ಆಳವಾದ ಗುಂಡಿಗೆ ಇಳಿದಿದ್ದಾರೆ ಎನ್ನಲಾಗಿದ್ದು, ಈಜು ಬಾರದೆ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ತಿಳಿದು ಸ್ಥಳಕ್ಕೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಮುಗ್ಧ ಬಾಲಕರ ಅಕಾಲಿಕ ಸಾವಿನ ಸುದ್ದಿ ತಿಳಿದು ಮರ್ಲೆ ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದ್ದು, ಮೃತ ಬಾಲಕರ ಕುಟುಂಬಸ್ಥರು ಹಾಗೂ ಸ್ನೇಹಿತರ ಆಕ್ರಂದನ ಮುಗಿಲುಮುಟ್ಟಿದೆ.






















