ಕೋಲಾರ: ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ರಾಜಕೀಯ ಅಧಿಕಾರದ ಸಂಭ್ರಮವನ್ನು ಕರ್ನಾಟಕ ಭಾರತೀಯ ಜನತಾ ಪಕ್ಷವು ನಡೆಸಲು ಉದ್ದೇಶಿಸಿರುವ
ಸೇವಾ ಸಂಕಲ್ಪ ಅಭಿಯಾನ ಮತ್ತು ಬೂತ್ ಮಟ್ಟದ ವಿಜಯ ಸಂಕಲ್ಪ ಯಾತ್ರೆಗೆ ಗುರುವಾರ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕರ್ನಾಟಕದ ಮೂಡಣಬಾಗಿಲು ಮುಳಬಾಗಿಲು ತಾಲೂಕಿನ ಕುರುಡುಮಲೆ ಶ್ರೀ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಗಣಪತಿಗೆ ಕೈಮುಗಿದ ನಂತರ ವಿಜಯೇಂದ್ರ ಬಂಗಾರಪೇಟೆ ನಗರದಲ್ಲಿ ಕಾರ್ಯಕರ್ತರ ಸಮಾವೇಶ ಮತ್ತು ಕೆಜಿಎಫ್ ವಿಧಾನಸಭಾ ಕ್ಷೇತ್ರದ ಬೇತಮಂಗಲದಲ್ಲಿ ರೋಡ್ ಶೋ ನಡೆಸಿದರು.
ಮುಂದಿನ 10 ದಿನಗಳ ಕಾಲ ಮೊದಲ ಹಂತದಲ್ಲಿ ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಬೂತ್ ಮಟ್ಟದಲ್ಲಿ ಸಂಘಟನೆಗೆ ಒತ್ತು ನೀಡಿ ಪಕ್ಷದ ಕಾರ್ಯಕರ್ತರೊಂದಿಗೆ ಸಮಾವೇಶ ನಡೆಸಿ ಸಂಘಟನೆಯನ್ನು ಬಲಪಡಿಸುವುದು ಯಾತ್ರೆಯ ಉದ್ದೇಶವಾಗಿದೆ.
ಸೇವಾ ಸಂಕಲ್ಪ ಅಭಿಯಾನದಲ್ಲಿ ರಕ್ತದಾನ, ಆರೋಗ್ಯ ತಪಾಸಣೆ ಸೇರಿದಂತೆ ಸೇವಾ ಕಾರ್ಯಕ್ರಮಗಳು ಹಾಗೂ ರೈತರು, ಮಹಿಳೆಯರು ಮತ್ತು ಕಾರ್ಮಿಕರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ವಿಜಯೇಂದ್ರ ತಿಳಿಸಿದರು.






















