SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಶಿರಸಿಯ ‘ಪ್ರೊಭಾರತ್ ಟೆಕ್ನಾಲಜೀಸ್’ ಸ್ಟಾರ್ಟ್‌ಅಪ್‌ಗೆ ವಿಶೇಷ ಗೌರವ

ಶಿರಸಿಯ ‘ಪ್ರೊಭಾರತ್ ಟೆಕ್ನಾಲಜೀಸ್’ ಸ್ಟಾರ್ಟ್‌ಅಪ್‌ಗೆ ವಿಶೇಷ ಗೌರವ

0
3

ಶಿರಸಿ: ಕರ್ನಾಟಕ ಸರ್ಕಾರದ ಐಟಿ-ಬಿಟಿ ಇಲಾಖೆ ಹಾಗೂ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಹಯೋಗದಲ್ಲಿ ಇತ್ತೀಚೆಗೆ ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಪ್ರತಿಷ್ಠಿತ ‘ಮಂಗಳೂರು ಟೆಕ್ನೋವಾನ್ಜಾ 2026’ ಸಮಾವೇಶದಲ್ಲಿ ಶಿರಸಿ ಮೂಲದ ‘ಪ್ರೊಭಾರತ್ ಟೆಕ್ನಾಲಜೀಸ್’ ಸಂಸ್ಥೆಗೆ ವಿಶೇಷ ಗೌರವ ಲಭಿಸಿದೆ.

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ‘ಎಲಿವೇಟ್’ ಯೋಜನೆಯ ವಿಜೇತ ಸಂಸ್ಥೆಯಾಗಿರುವ ಪ್ರೊಭಾರತ್ ಟೆಕ್ನಾಲಜೀಸ್‌ನ ಸಂಸ್ಥಾಪಕ ಹಾಗೂ ಸಿಇಒ, ಹುಳಗೋಳದ ಪ್ರವರ್ ಹೆಗಡೆ ಅವರನ್ನು ಸಮಾವೇಶದ ಮುಖ್ಯ ವೇದಿಕೆಯಲ್ಲಿ ಕೆ.ಡಿ.ಇ.ಎಂ.ನ ಸಿಇಒ ಸಂಜೀವಕುಮಾರ್ ಗುಪ್ತಾ ಅವರು ಪ್ರಶಸ್ತಿ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಮುಖರಾದ ವಿಶ್ವ ಹೆಗಡೆ, ರಿತೇಶ್‌ರಾಜ್ ಹಿರಾಸ್ಕರ್ ಹಾಗೂ ನಿತಿನ್ ನಾಯ್ಕ ಉಪಸ್ಥಿತರಿದ್ದರು.

ಸ್ವದೇಶಿ 3ಡಿ ಪ್ರಿಂಟರ್ ಪ್ರದರ್ಶನ: 3ಡಿ ಪ್ರಿಂಟಿಂಗ್ ಮತ್ತು ಸುಧಾರಿತ ಹಾರ್ಡ್‌ವೇರ್ ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ವದೇಶಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತಿರುವ ಪ್ರೊಭಾರತ್ ಟೆಕ್ನಾಲಜೀಸ್, ಸಮಾವೇಶದಲ್ಲಿ ತಾನು ರೂಪಿಸಿರುವ ನೂತನ ಸ್ವದೇಶಿ ಮಾಡ್ಯುಲರ್ 3ಡಿ ಪ್ರಿಂಟರ್ ಅನ್ನು ಪ್ರದರ್ಶಿಸಿತು. ಈ ಉಪಕರಣವು ಸಾಮಾನ್ಯ 3ಡಿ ಮುದ್ರಣಕ್ಕೆ ಸೀಮಿತವಾಗಿರದೆ, ಮುಂಬರುವ ದಿನಗಳಲ್ಲಿ ಪಿಸಿಬಿ ಪ್ರೋಟೋಟೈಪಿಂಗ್ ಹಾಗೂ ಪಿಸಿಬಿ ಫ್ಯಾಬ್ರಿಕೇಶನ್ ಸೇರಿದಂತೆ ವಿವಿಧ ಮಾಡ್ಯುಲರ್ ಟೂಲ್‌‌ಗಳನ್ನು ಒಂದೇ ವೇದಿಕೆಯಲ್ಲಿ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದುವಂತೆ ಅಭಿವೃದ್ಧಿಪಡಿಸಲಾಗುತ್ತಿದೆ.

ಪ್ರೊಭಾರತ್ ಟೆಕ್ನಾಲಜೀಸ್ ಸಂಸ್ಥಾಪಕ, ಸಿಇಒ ಪ್ರವರ್ ಹೆಗಡೆ ಮಾತನಾಡಿ, “ಶಿರಸಿಯಂತಹ ಸ್ಥಳದಿಂದ ಜಾಗತಿಕ ಗುಣಮಟ್ಟದ ಸ್ವದೇಶಿ ಹಾರ್ಡ್‌ವೇರ್ ಮತ್ತು 3ಡಿ ಮುದ್ರಣ ತಂತ್ರಜ್ಞಾನವನ್ನು ರೂಪಿಸುತ್ತಿರುವ ನಮ್ಮ ಪ್ರಯತ್ನಕ್ಕೆ ರಾಜ್ಯ ಸರ್ಕಾರದ ‘ಎಲಿವೇಟ್’ ಯೋಜನೆ ಹಾಗೂ ‘ಬಿಯಾಂಡ್ ಬೆಂಗಳೂರು’ ವೇದಿಕೆ ದೊಡ್ಡ ಬಲ ನೀಡಿದೆ. ಭಾರತೀಯ ಉತ್ಪಾದನಾ ರಂಗಕ್ಕೆ ಅಗತ್ಯವಿರುವ ಸಂಪೂರ್ಣ ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್ ಇಕೋಸಿಸ್ಟಂ ಅನ್ನು ಸ್ವದೇಶಿಯಾಗಿ ಕಟ್ಟುವುದು ನಮ್ಮ ಗುರಿ” ಎಂದು ಹೇಳಿದ್ದಾರೆ.