ಬೆಂಗಳೂರು: ಕಲೆ, ಸಂಸ್ಕೃತಿ, ಕರಕುಶಲತೆ ಹಾಗೂ ಸ್ಥಳೀಯ ಉದ್ಯಮಶೀಲತೆಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ‘ಕರ್ನಾಟಕ ಪರ್ವ-2026’ ಉತ್ಸವ ಸೆಪ್ಟೆಂಬರ್ 26ರಿಂದ 30ರವರೆಗೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆಯಲಿದೆ.
ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ವತಿಯಿಂದ ಆಯೋಜಿಸಲಾಗಿರುವ ಈ ಐದು ದಿನಗಳ ಉತ್ಸವವನ್ನು ಸೆಪ್ಟೆಂಬರ್ 26ರಂದು ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್, ಸಚಿವರಾದ ಕೆ.ಜೆ. ಜಾರ್ಜ್, ಬಿ.ಝಡ್. ಜಮೀರ್ ಅಹ್ಮದ್ ಖಾನ್ ಹಾಗೂ ರಿಜ್ವಾನ್ ಅರ್ಷದ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ತೆಲಂಗಾಣ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವ ಮೊಹಮ್ಮದ್ ಅಜರುದ್ದೀನ್ ಹಾಗೂ ಕೇರಳ ಸರ್ಕಾರದ ಉನ್ನತ ಶಿಕ್ಷಣ ಸಚಿವ ರೋಜಿ ಎಂ. ಜಾನ್ ಅವರು ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ.
ಕರ್ನಾಟಕದ ವಿವಿಧ ಭಾಗಗಳ ವೈಶಿಷ್ಟ್ಯಗಳ ಪರಿಚಯ ಈ ಪರ್ವದ ಪ್ರಮುಖ ಆಕರ್ಷಣೆಯಾಗಿದ್ದು, ರಾಜ್ಯದ ಮೂಲೆಮೂಲೆಗಳಿಂದ ತರಲಾದ ವಿಶಿಷ್ಟ ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳ 180ಕ್ಕೂ ಹೆಚ್ಚು ಮಳಿಗೆಗಳು ಇಲ್ಲಿ ಇರಲಿವೆ. ಆಹಾರ ಮೇಳ ಹಾಗೂ ವಿವಿಧ ವಸ್ತುಗಳ ಪ್ರದರ್ಶನವೂ ನಡೆಯಲಿದೆ.
ಉದ್ಯಮಶೀಲತೆ, ಕೌಶಲ್ಯಾಭಿವೃದ್ಧಿ, ಮಹಿಳಾ ಸಬಲೀಕರಣ ಹಾಗೂ ಯುವ ಸಬಲೀಕರಣ ಸೇರಿದಂತೆ ಹಲವು ವಿಷಯಗಳ ಕುರಿತು ವಿಚಾರಗೋಷ್ಠಿಗಳನ್ನು ಆಯೋಜಿಸಲಾಗಿದೆ. ಇದರ ಜೊತೆಗೆ ಡೊಳ್ಳು ಕುಣಿತ, ದಫ್, ಕೊಂಕಣಿ ವಾದ್ಯ, ಭಾಂಗ್ರಾ ಸೇರಿದಂತೆ ವಿವಿಧ ಜನಪದ ಕಲಾ ಪ್ರದರ್ಶನಗಳು ಉತ್ಸವಕ್ಕೆ ಮೆರುಗು ನೀಡಲಿವೆ.
ಪ್ರತಿದಿನ ಸಂಜೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸೆಪ್ಟೆಂಬರ್ 26ರಂದು ವಿಜಯ್ ಪ್ರಕಾಶ್, ಸೆ.27ರಂದು ಅಜಯ್ ವಾರಿಯರ್ ಮತ್ತು ನಾದಿರಾ ಬಾನು, ಸೆ.28ರಂದು ಸೂಫಿ ಗಾಯಕ ಆದಿಲ್ ಹುಸೇನಿ, ಸೆ.29ರಂದು ವಾರ್ಸಿ ಸಹೋದರರ ಕವ್ವಾಲಿ ಹಾಗೂ ಸೆ.30ರಂದು ಮುಶಾಯಿರಾ ನಡೆಯಲಿದೆ.
ಸೆಪ್ಟೆಂಬರ್ 26ರಿಂದ 30ರವರೆಗೆ ನಡೆಯಲಿರುವ ಈ ಉತ್ಸವವು ಕರ್ನಾಟಕದ ವಿವಿಧ ಪ್ರದೇಶಗಳ ಕಲೆ, ಸಂಸ್ಕೃತಿ, ಆಹಾರ, ಕರಕುಶಲತೆ ಮತ್ತು ಉದ್ಯಮಶೀಲತೆಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ವೇದಿಕೆಯಾಗಿ ರೂಪುಗೊಳ್ಳಲಿದೆ. ಕುಟುಂಬ ಸಮೇತರಾಗಿ ಉತ್ಸವದಲ್ಲಿ ಭಾಗವಹಿಸಿ ಕರ್ನಾಟಕದ ವೈವಿಧ್ಯತೆಯನ್ನು ಸಂಭ್ರಮಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.






















