SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ದಾಂಡೇಲಿಯ ಕಾಳಿನದಿಯಲ್ಲಿ ವಿಸರ್ಜಿತ ಗಣಪನ ಮೂರ್ತಿಗಳ ರಾಶಿ

ದಾಂಡೇಲಿಯ ಕಾಳಿನದಿಯಲ್ಲಿ ವಿಸರ್ಜಿತ ಗಣಪನ ಮೂರ್ತಿಗಳ ರಾಶಿ

0
205

ದಾಂಡೇಲಿಯಲ್ಲಿ ಗಣೇಶೋತ್ಸವಕ್ಕೆ ತೆರೆ: ಕಾಳಿನದಿ ಸ್ವಚ್ಛತೆಗೆ ನಗರಾಡಳಿತದ ಜವಾಬ್ದಾರಿ

ದಾಂಡೇಲಿ (ಉತ್ತರ ಕನ್ನಡ) ಸಂ.ಕ. ಸಮಾಚಾರ : ನಗರದಲ್ಲಿ ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ನಡೆದ ಗಣೇಶೋತ್ಸವಕ್ಕೆ ಇಂದು ತೆರೆ ಬೀಳುತ್ತಿದೆ. ಮನೆ ಹಾಗೂ ಸಾರ್ವಜನಿಕ ಗಣಪನ ಮೂರ್ತಿಗಳಿಗೆ ಪೂಜೆ ಸಲ್ಲಿಸಿದ ಭಕ್ತರು ಶ್ರದ್ಧಾಭಕ್ತಿಯಿಂದ ಕಾಳಿನದಿಯಲ್ಲಿ ವಿಸರ್ಜನೆ ನೆರವೇರಿಸುತ್ತಿದ್ದಾರೆ.

ಆದರೆ, ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ವಿಸರ್ಜಿತ ಗಣಪನ ಮೂರ್ತಿಗಳು ಸಂಪೂರ್ಣವಾಗಿ ಮುಳುಗದೆ ರಾಶಿಯಾಗಿ ಕಾಣಿಸುತ್ತಿವೆ. ದೊಡ್ಡ ಸಾರ್ವಜನಿಕ ಗಣಪನ ಮೂರ್ತಿಗಳು ನದಿಯಲ್ಲಿ ಅಡ್ಡಬಿದ್ದು, ದೀರ್ಘಕಾಲ ಅಲ್ಲಿಯೇ ಉಳಿಯುವ ಸ್ಥಿತಿ ನಿರ್ಮಾಣವಾಗಿದೆ.

ಮಣ್ಣಿನ ಮೂರ್ತಿಗಳು ನೀರಿನಲ್ಲಿ ಕರಗಿದರೂ, ಮೂರ್ತಿಯ ಗಾತ್ರ ಹಾಗೂ ಬಳಸಿದ ಬಣ್ಣ–ವಸ್ತುಗಳನ್ನು ಅವಲಂಬಿಸಿ ಕರಗುವ ಅವಧಿ ಬದಲಾಗುತ್ತದೆ. ಅವಶೇಷಗಳು ನದಿಯ ತಳದಲ್ಲಿ ಸಂಗ್ರಹವಾಗಿ ಹೂಳು ಹಾಗೂ ತ್ಯಾಜ್ಯ ಹೆಚ್ಚಿಸುವ ಸಾಧ್ಯತೆಯೂ ಇದೆ.

ಭಕ್ತಿಯ ಬಳಿಕ ನದಿಯ ಮೇಲೂ ಜವಾಬ್ದಾರಿ ಇರಲಿ : ವಿಸರ್ಜನೆಯ ಬಳಿಕ ನದಿಯಲ್ಲಿ ಉಳಿಯುವ ಗಣಪನ ಮೂರ್ತಿಗಳ ಅವಶೇಷ, ಹೂವು, ಅಲಂಕಾರಿಕ ವಸ್ತುಗಳು ಹಾಗೂ ಇತರ ತ್ಯಾಜ್ಯವನ್ನು ತೆರವುಗೊಳಿಸುವುದು ಅಗತ್ಯ. ಇಲ್ಲಿ ಭಕ್ತರ ಪರಿಸರ ಕಾಳಜಿಯ ಜೊತೆಗೆ ನಗರಾಡಳಿತದ ನಿರ್ವಹಣಾ ಹೊಣೆಗಾರಿಕೆಯೂ ಮಹತ್ವದ್ದಾಗಿದೆ.

ವಿಸರ್ಜನಾ ಸ್ಥಳವನ್ನು ಮುಂಚಿತವಾಗಿ ಗುರುತಿಸಿ, ದೊಡ್ಡ ಮೂರ್ತಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು, ವಿಸರ್ಜನೆಯ ಬಳಿಕ ನದಿಯಲ್ಲಿ ಉಳಿಯುವ ಮೂರ್ತಿಗಳ ಅವಶೇಷ ಹಾಗೂ ತ್ಯಾಜ್ಯವನ್ನು ತಕ್ಷಣ ತೆರವುಗೊಳಿಸುವುದು ಮತ್ತು ನದಿ ಪರಿಸರಕ್ಕೆ ಹಾನಿಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವುದು ನಗರಾಡಳಿತದ ಪ್ರಮುಖ ಜವಾಬ್ದಾರಿಯಾಗಿದೆ.

ಮುಂದಿನ ಗಣೇಶೋತ್ಸವಕ್ಕೂ ಮುನ್ನ ಪರಿಸರ ಸ್ನೇಹಿ ವಿಸರ್ಜನೆಗೆ ಶಾಶ್ವತ ವ್ಯವಸ್ಥೆ ರೂಪಿಸುವುದು, ಸೂಕ್ತ ಸ್ಥಳದಲ್ಲಿ ವಿಸರ್ಜನಾ ಸೌಲಭ್ಯ ಕಲ್ಪಿಸುವುದು ಹಾಗೂ ಬಳಿಕದ ಸ್ವಚ್ಛತಾ ಕಾರ್ಯಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡುವುದು ಅಗತ್ಯವಾಗಿದೆ.

ಗಣಪನನ್ನು ಭಕ್ತಿಯಿಂದ ಬರಮಾಡಿಕೊಂಡು ಶ್ರದ್ಧೆಯಿಂದ ವಿಸರ್ಜಿಸುವಂತೆ, ವಿಸರ್ಜನೆಯ ಬಳಿಕ ಕಾಳಿನದಿಯ ಸ್ವಚ್ಛತೆಯನ್ನು ಕಾಪಾಡುವದು ಎಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಭಕ್ತರು ಸಹಕರಿಸುವುದರ ಜೊತೆಗೆ ನಗರಾಡಳಿತವು ಪರಿಣಾಮಕಾರಿ ನಿರ್ವಹಣಾ ವ್ಯವಸ್ಥೆ ಕಲ್ಪಿಸಬೇಕಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.