SK Home Ad
Home ಸಿನಿ ಮಿಲ್ಸ್ ಯೋಧನಾಗಿ ರಾಘವ ಲಾರೆನ್ಸ್; 5 ಭಾಷೆಗಳ ‘ಮಹಾವೀರ್ ಕರ್ಣ’ ಫಸ್ಟ್ ಲುಕ್ ರಿಲೀಸ್

ಯೋಧನಾಗಿ ರಾಘವ ಲಾರೆನ್ಸ್; 5 ಭಾಷೆಗಳ ‘ಮಹಾವೀರ್ ಕರ್ಣ’ ಫಸ್ಟ್ ಲುಕ್ ರಿಲೀಸ್

0
67
ರಾಘವ ಲಾರೆನ್ಸ್ ‘ಮಹಾವೀರ್ ಕರ್ಣ’: ಕರ್ಣನಾಗಿ ನಟನ ಹೊಸ ಅವತಾರದ ಭರ್ಜರಿ ಫಸ್ಟ್ ಲುಕ್

ರಾಘವ ಲಾರೆನ್ಸ್ ‘ಮಹಾವೀರ್ ಕರ್ಣ’: ಕರ್ಣನಾಗಿ ನಟನ ಹೊಸ ಅವತಾರಕ್ಕೆ ಭರ್ಜರಿ ಫಸ್ಟ್ ಲುಕ್

ಚೆನ್ನೈ: ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ಕರ್ಣನ ಕಥೆಯನ್ನು ಆಧರಿಸಿ ನಿರ್ದೇಶಕ ರಮೇಶ್ ವರ್ಮಾ ನಿರ್ಮಾಣದ ಬಹುನಿರೀಕ್ಷಿತ ಪೌರಾಣಿಕ ಚಿತ್ರ ‘ಮಹಾವೀರ್ ಕರ್ಣ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ನಟ ರಾಘವ ಲಾರೆನ್ಸ್ ಅವರು ಕರ್ಣನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್‌ಗಳು ಮಂಗಳವಾರ ಬಿಡುಗಡೆಯಾಗಿದ್ದು, ಚಿತ್ರರಂಗದಲ್ಲಿ ಗಮನ ಸೆಳೆದಿವೆ.

ಚಿತ್ರದ ನಿರ್ಮಾಣ ಸಂಸ್ಥೆ ಪೆನ್ ಮೂವೀಸ್ ಸಾಮಾಜಿಕ ಜಾಲತಾಣದಲ್ಲಿ ಫಸ್ಟ್ ಲುಕ್ ಹಂಚಿಕೊಂಡಿದ್ದು, ರಾಘವ ಲಾರೆನ್ಸ್ ಮೊದಲ ಬಾರಿಗೆ ಪೌರಾಣಿಕ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ. ಕರ್ಣನ ಪಾತ್ರವನ್ನು ಸ್ವೀಕರಿಸಿರುವ ರಾಘವ ಲಾರೆನ್ಸ್ ಕೂಡ ಈ ಮಹತ್ವದ ಪಾತ್ರ ನಿರ್ವಹಿಸುವ ಅವಕಾಶಕ್ಕಾಗಿ ನಿರ್ದೇಶಕ ರಮೇಶ್ ವರ್ಮಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಮಹಾಭಾರತದಲ್ಲಿ ಕರ್ಣನು ಧೈರ್ಯ, ದಾನಶೀಲತೆ, ನಿಷ್ಠೆ, ಸ್ನೇಹ ಮತ್ತು ವಿಧಿಯೊಂದಿಗೆ ಹೋರಾಡುವ ಸಂಕೀರ್ಣ ಪಾತ್ರವಾಗಿ ಗುರುತಿಸಿಕೊಂಡಿದ್ದಾನೆ. ಇದೇ ಹಿನ್ನೆಲೆಯಲ್ಲಿ ಚಿತ್ರದಲ್ಲಿ ಕರ್ಣನ ಜೀವನ ಹಾಗೂ ಆತನ ವ್ಯಕ್ತಿತ್ವವನ್ನು ದೊಡ್ಡ ಸಿನಿಮಾಟಿಕ್ ಕ್ಯಾನ್ವಾಸ್‌ನಲ್ಲಿ ಕಟ್ಟಿಕೊಡುವ ಪ್ರಯತ್ನ ನಡೆಯುತ್ತಿದೆ. ಚಿತ್ರದ ಟೀಸರ್‌ನಲ್ಲಿಯೂ ಕರ್ಣನ ನಿಷ್ಠೆ, ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಗುಣ ಹಾಗೂ ವಿಧಿಯೊಂದಿಗಿನ ಸಂಘರ್ಷಕ್ಕೆ ಒತ್ತು ನೀಡಲಾಗಿದೆ.

₹150 ಕೋಟಿ ಬಜೆಟ್‌ನಲ್ಲಿ ನಿರ್ಮಾಣ? : ವರದಿಗಳ ಪ್ರಕಾರ ‘ಮಹಾವೀರ್ ಕರ್ಣ’ ಚಿತ್ರವನ್ನು ಸುಮಾರು ₹150 ಕೋಟಿ ಬಜೆಟ್‌ನಲ್ಲಿ ಭವ್ಯ ಪ್ರಮಾಣದಲ್ಲಿ ನಿರ್ಮಿಸಲಾಗುತ್ತಿದೆ. ಭವ್ಯ ಸೆಟ್‌ಗಳು, ಯುದ್ಧದ ದೃಶ್ಯಗಳು, ಪೀರಿಯಡ್‌ ವರ್ಲ್ಡ್‌ ವಿನ್ಯಾಸ ಹಾಗೂ ವ್ಯಾಪಕ VFX ಬಳಕೆಯ ಮೂಲಕ ಮಹಾಭಾರತದ ಕಾಲಘಟ್ಟವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಚಿತ್ರತಂಡದ ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.

ಚಿತ್ರವನ್ನು ತಮಿಳು, ತೆಲುಗು, ಹಿಂದಿ, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಆರಂಭದಲ್ಲಿ ಚಿತ್ರಕ್ಕೆ ಸಂಬಂಧಿಸಿದ ಟೀಸರ್ ಆಗಸ್ಟ್‌ನಲ್ಲಿ ಬಿಡುಗಡೆಯಾಗಿದ್ದು, ಚಿತ್ರವು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು.

ಪೆನ್ ಮೂವೀಸ್, ಶ್ರೀ ನೀಲಾದ್ರಿ ಪ್ರೊಡಕ್ಷನ್ಸ್ ಹಾಗೂ ಆರ್‌ವಿ ಸ್ಟುಡಿಯೋಸ್ ಸಹಯೋಗದಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ರಮೇಶ್ ವರ್ಮಾ ನಿರ್ದೇಶನದ ಈ ಸಿನಿಮಾಗೆ ರಾಮ್‌ಜಿ ದತ್ ಛಾಯಾಗ್ರಹಣ, ಪ್ರವೀಣ್ ಪುಡಿ ಸಂಕಲನ ಹಾಗೂ ಜ್ಞಾನಿ ಸಂಗೀತದ ಹೊಣೆ ಹೊತ್ತಿದ್ದಾರೆ.

ಚಿತ್ರದ ಫಸ್ಟ್ ಲುಕ್ ಬಿಡುಗಡೆಯ ಬೆನ್ನಲ್ಲೇ ರಾಘವ ಲಾರೆನ್ಸ್ ಅವರ ಕರ್ಣನ ಅವತಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಕರ್ಣನನ್ನು ಯಾವ ರೀತಿಯಲ್ಲಿ ಚಿತ್ರಿಸಲಾಗುತ್ತದೆ ಎಂಬ ಕುತೂಹಲವೂ ಅಭಿಮಾನಿಗಳಲ್ಲಿ ಮೂಡಿದೆ.

ಚಿತ್ರದ ಬಿಡುಗಡೆ ದಿನಾಂಕದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿಲ್ಲದಿದ್ದರು 2027 ರಲ್ಲಿ ಬಿಡುಗಡೆ ಎಂಬ ಮಾಹಿತಿಯನ್ನು ಚಿತ್ರದ ಪೋಸ್ಟ್‌ರನಲ್ಲಿ ನೀಡಲಾಗಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.