ಮೈಸೂರು: ದಸರಾ ಸಂದರ್ಭದಲ್ಲಿ ಕಂಬಳ ಆಯೋಜಿಸುವುದು ಬೇಡ. ದಸರಾ ಮುಗಿದ ಬಳಿಕ ಕಂಬಳ ನಡೆಸಬಹುದಿತ್ತು ಎಂದು ರಾಜಮನೆತನದ ಪ್ರಮೋದಾದೇವಿ ಒಡೆಯರ್ ಹೇಳಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ದಸರಾದಲ್ಲಿ ಕಂಬಳವನ್ನು ಸೇರಿಸುವುದಾಗಿ ಸರ್ಕಾರ ತಿಳಿಸಿತ್ತು. ಈ ಕುರಿತು ಪರ-ವಿರೋಧ ಚರ್ಚೆಗಳೂ ನಡೆದಿವೆ. ಹೀಗಾಗಿ ಈ ಬಾರಿ ದಸರಾ ಕಾರ್ಯಕ್ರಮದ ಭಾಗವಾಗಿ ಕಂಬಳ ನಡೆಸುವುದು ಬೇಡ ಎಂಬುದು ತಮ್ಮ ಅಭಿಪ್ರಾಯ ಎಂದು ಹೇಳಿದರು.
ಅ. 11ರಂದು ಖಾಸಗಿ ದರ್ಬಾರ್: ಅರಮನೆಯಲ್ಲಿ ಅ. 5ರಂದು ಸಿಂಹಾಸನ ಜೋಡಣೆ ಕಾರ್ಯ ನಡೆಯಲಿದೆ. ಅ. 11ರಂದು ಬೆಳಿಗ್ಗೆ 11.45ಕ್ಕೆ ಖಾಸಗಿ ದರ್ಬಾರ್ ಆರಂಭವಾಗಲಿದೆ ಎಂದು ಪ್ರಮೋದಾದೇವಿ ಒಡೆಯರ್ ತಿಳಿಸಿದರು.
ರಾಜಮನೆತನಕ್ಕೆ ಸಂಬಂಧಿಸಿದಂತೆ ಇನ್ನೂ ಹಲವು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಅವುಗಳ ಸಂಖ್ಯೆ ಲೆಕ್ಕಕ್ಕೆ ಸಿಗದಷ್ಟು ಹೆಚ್ಚಿದ್ದು, ಎಣಿಸಲು ಸಾಧ್ಯವಾಗದಷ್ಟು ಪ್ರಕರಣಗಳು ಬಾಕಿ ಇವೆ ಎಂದು ಅವರು ಹೇಳಿದರು.




















