SK Home Ad
Home ಸುದ್ದಿ ರಾಜ್ಯ ಗಣೇಶ ಮೆರವಣಿಗೆಗೆ ರೂಲ್ಸ್‌ ಮೇಲೆ ರೂಲ್ಸ್‌: ರಾಜ್ಯಾದ್ಯಂತ ಆಕ್ರೋಶ

ಗಣೇಶ ಮೆರವಣಿಗೆಗೆ ರೂಲ್ಸ್‌ ಮೇಲೆ ರೂಲ್ಸ್‌: ರಾಜ್ಯಾದ್ಯಂತ ಆಕ್ರೋಶ

0
26

ಬೆಂಗಳೂರು:‌ ಗಣೇಶ ಚತುರ್ಥಿ ಆಚರಣೆಗೆ ರಾಜ್ಯದಾದ್ಯಂತ ಸಿದ್ಧತೆಗಳು ಭರದಿಂದ ಸಾಗುತ್ತಿರುವ ಬೆನ್ನಲ್ಲೇ, ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ ಹಾಗೂ ವಿಸರ್ಜನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತಗಳು ಮತ್ತು ಪೊಲೀಸ್ ಇಲಾಖೆ ವಿಧಿಸಿರುವ ಹಲವು ನಿಯಮಗಳ ವಿರುದ್ಧ ಕರ್ನಾಟಕದಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ಗಣೇಶೋತ್ಸವದ ಸಂದರ್ಭದಲ್ಲಿ ಡಿಜೆ ಬಳಕೆಗೆ ನಿರ್ಬಂಧ, ಧ್ವನಿವರ್ಧಕಗಳ ಶಬ್ದಮಿತಿ ಹಾಗೂ ಮೆರವಣಿಗೆಗೆ ನಿಗದಿಪಡಿಸಿರುವ ಮಾರ್ಗದ ಬಗ್ಗೆ ಉತ್ಸವ ಸಮಿತಿಗಳ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಬಿಜೆಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದು, ಬೇರೆ ಧರ್ಮದವರ ಮೆರವಣಿಗೆಗೆ ಇಲ್ಲದ ನಿರ್ಬಂಧ ಗಣೇಶ ಮೆರವಣಿಗೆಗೆ ಏಕೆ. ನಿರ್ಬಂಧಗಳನ್ನು ಸಡಿಲ ಮಾಡುವಂತೆ ಪೊಲೀಸರಿಗೆ ಸೂಚನೆ ನೀಡಬೇಕು ಎಂದು ಕೆಲವು ಶಾಸಕರು ಸಿಎಂಗೆ ಪತ್ರ ಬರೆದಿದ್ದಾರೆ.

ಈ ಮಧ್ಯೆ ಮಕ್ಕಳು, ಹಿರಿಯರು ಹಾಗೂ ಜಾನುವಾರುಗಳ ಆರೋಗ್ಯದ ಮೇಲೆ ಅತಿಯಾದ ಶಬ್ದದ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಡಿಜೆ ಬಳಕೆಗೆ ನಿರ್ಬಂಧ ವಿಧಿಸಲಾಗುತ್ತಿದೆ ಎಂದು ಜಿಲ್ಲಾಡಳಿತಗಳು ಸಮರ್ಥಿಸಿಕೊಂಡಿವೆ. ಡಿಜೆ ಬದಲಿಗೆ ನಿಗದಿತ ಶಬ್ದಮಿತಿಯೊಳಗೆ ಧ್ವನಿವರ್ಧಕ ವ್ಯವಸ್ಥೆ ಬಳಸಲು ಅವಕಾಶ ಕಲ್ಪಿಸುವ ಕುರಿತು ಕೆಲವು ಜಿಲ್ಲೆಗಳಲ್ಲಿ ಚರ್ಚೆ ನಡೆದಿದೆ.

ಅನಗತ್ಯ ಕಿರುಕುಳ ಸರಿಯಲ್ಲ: ನಿಯಮಗಳ ಹೆಸರಿನಲ್ಲಿ ಸಾರ್ವಜನಿಕರು, ಯುವಕರು ಹಾಗೂ ಗಣೇಶೋತ್ಸವ ಆಯೋಜಕರಿಗೆ ಅನಗತ್ಯ ಕಿರುಕುಳ ನೀಡುವುದನ್ನು ತಡೆಯಲು ಪೊಲೀಸ್ ಮತ್ತು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಇಲ್ಲವಾದಲ್ಲಿ ಜನರನ್ನು ಒಗ್ಗೂಡಿಸಿ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಗಣೇಶೋತ್ಸವದ ಹೆಸರಿನಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ, ಧ್ವನಿಮಾಲಿನ್ಯ ಅಥವಾ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳುವುದು ಅಗತ್ಯ. ಅದೇ ವೇಳೆ, ಹಬ್ಬದ ಸಾಂಪ್ರದಾಯಿಕ ಆಚರಣೆಗಳಿಗೆ ಅಡ್ಡಿಯಾಗದಂತೆ ನಿಯಮಗಳನ್ನು ಸರಳಗೊಳಿಸಿ, ಎಲ್ಲರ ಸಹಕಾರದೊಂದಿಗೆ ಉತ್ಸವ ನಡೆಯುವ ವಾತಾವರಣ ನಿರ್ಮಿಸಬೇಕು ಎಂದು ರಾಜ್ಯದಲ್ಲಿ ಗಣೇಶೋತ್ಸವ ಆಯೋಜನೆ ಮಾಡುವ ಸಂಘಗಳು ಆಗ್ರಹಿಸಿವೆ.