SK Home Ad
Home ಸುದ್ದಿ ರಾಜ್ಯ ಇಡಿ ದಾಳಿ 18 ಕಡೆ; ಟಾರ್ಗೆಟ್ ಸತೀಶ್ ಜಾರಕಿಹೊಳಿ ಒಬ್ಬರೇ…!

ಇಡಿ ದಾಳಿ 18 ಕಡೆ; ಟಾರ್ಗೆಟ್ ಸತೀಶ್ ಜಾರಕಿಹೊಳಿ ಒಬ್ಬರೇ…!

0
4

ಬೆಳಗಾವಿ: ದಾಳಿ ನಡೆದಿದ್ದು ಸಚಿವರ ಕುಟುಂಬ ಮತ್ತು ಆಪ್ತರಿಗೆ ಸಂಬಂಧಿಸಿದ 18 ಸ್ಥಳಗಳಲ್ಲಿ. ಆದರೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೇಳಿದ ಪ್ರಶ್ನೆಗಳ ಕೇಂದ್ರ ಬಿಂದು ಮಾತ್ರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ.

‘ಸತೀಶ್ ಎಲ್ಲೆಲ್ಲಿ ಏನು ಮಾಡಿದ್ದಾರೆ?’, ‘ನಿಮಗೂ ಅವರಿಗೂ ಏನು ಸಂಬಂಧ?’, ‘ಅವರ ಉದ್ಯಮದಲ್ಲಿ ನಿಮ್ಮ ಪಾತ್ರವೇನು?’, ‘ಅವರಿಂದ ನಿಮ್ಮ ಖಾತೆಗೆ ಹಣ ಬಂದಿದೆಯೇ?’ ಆಪ್ತರ ಮನೆ ಕಚೇರಿಗಳಲ್ಲಿ ನಡೆದ ವಿಚಾರಣೆಯ ವೇಳೆ ಇಂಥದ್ದೇ ಪ್ರಶ್ನೆಗಳು ಮರುಕಳಿಸಿದವು ಎನ್ನಲಾಗಿದೆ.

ಇಡಿ ತನ್ನ ಪ್ರಶ್ನಾವಳಿಯನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೂ ಕಾರ್ಯಾಚರಣೆಯ ದಿಕ್ಕು ಗಮನಿಸಿದರೆ, ಆಪ್ತರ ಮನೆಗಳು ದಾಳಿಯ ವಿಳಾಸಗಳಷ್ಟೇ; ಸತೀಶ್ ಅವರ ಹಣಕಾಸು ಮತ್ತು ಉದ್ಯಮ ಚಟುವಟಿಕೆಯೇ ನಿಜವಾದ ಗುರಿಯಾಗಿತ್ತೇ? ಎಂಬ ಅನುಮಾನ ಬಲವಾಗಿದೆ.

ಸಚಿವರ ಬೆಂಗಳೂರು ಮತ್ತು ಗೋಕಾಕ ನಿವಾಸ, ಪುತ್ರಿ ಹಾಗೂ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸ್ಥಳಗಳು, ಪುತ್ರ ಮತ್ತು ಆಪ್ತರ ಮನೆ ಕಚೇರಿಗಳಲ್ಲಿ ಸುಮಾರು 38 ಗಂಟೆಗಳ ಕಾಲ ಶೋಧ ನಡೆದಿದೆ.

‘ಹಣ ನಮ್ಮದೇ; ಅದಕ್ಕೆ ಲೆಕ್ಕವಿದೆ. ಅಧಿಕಾರಿಗಳು ಕೇಳಿದ ದಾಖಲೆಗಳನ್ನು ನೀಡಿದ್ದೇವೆ’ ಎಂಬುದು ಸಚಿವರ ಸ್ಪಷ್ಟನೆ. ವ್ಯವಹಾರಸ್ಥರ ಮನೆಯಲ್ಲಿ ಹಣ ಸಿಕ್ಕಿದೆ ಎಂಬುದಷ್ಟೇ ಅದು ಅಕ್ರಮ ಎನ್ನುವುದಕ್ಕೆ ಸಾಕಾಗದು. ಹಣದ ಮೂಲ ಅಘೋಷಿತ ಎಂಬುದನ್ನು ತನಿಖಾ ಸಂಸ್ಥೆಯೇ ಸಾಬೀತುಪಡಿಸಬೇಕಿದೆ.

ಖಜಾನೆ ಸಿಗಲಿಲ್ಲ; ಕಡತಗಳೇ ಅಸ್ತ್ರ: ಆಫ್ರಿಕಾ ದೇಶಗಳಲ್ಲಿನ ಹೂಡಿಕೆ, ಸಕ್ಕರೆ ಉದ್ಯಮ, ಬ್ಯಾಂಕ್ ವಹಿವಾಟು ಹಾಗೂ ಆಪ್ತರೊಂದಿಗಿನ ಹಣಕಾಸು ಸಂಬಂಧದ ದಾಖಲೆಗಳನ್ನು ಇಡಿ ಪರಿಶೀಲಿಸುತ್ತಿದೆ ಎನ್ನಲಾಗಿದೆ. ಆದರೆ ನೂರಾರು ಕೋಟಿಯ ಬೇನಾಮಿ ಆಸ್ತಿ, ಅಪಾರ ಚಿನ್ನಾಭರಣ ಅಥವಾ ದೊಡ್ಡ ವಿದೇಶಿ ಹಣದ ಜಾಲ ಪತ್ತೆಯಾಗಿದೆ ಎಂಬ ಅಧಿಕೃತ ಮಾಹಿತಿ ಇಲ್ಲ. ಹೀಗಾಗಿ ಸತೀಶ್ ಬೆಂಬಲಿಗರು, ‘ಗುಡ್ಡ ಅಗೆದು ಇಲಿ ಹಿಡಿದರೇ?’ ಎಂದು ಪ್ರಶ್ನಿಸುತ್ತಿದ್ದಾರೆ.

ವಿಳಾಸ 18… ಪ್ರಶ್ನೆ ಒಂದೇ: ರಾಜ್ಯ ಕಾಂಗ್ರೆಸ್‌ನ ಪ್ರಭಾವಿ ಪರಿಶಿಷ್ಟ ಪಂಗಡದ ನಾಯಕನಾಗಿ ಬೆಳೆಯುತ್ತಿರುವ ಸತೀಶ್ ಅವರನ್ನು ರಾಜಕೀಯವಾಗಿ ಕಟ್ಟಿಹಾಕಲು ಈ ಕಾರ್ಯಾಚರಣೆಯೇ ಎಂಬ ಶಂಕೆಯೂ ಕಾಂಗ್ರೆಸ್ ಪಾಳಯದಲ್ಲಿದೆ. ದಾಳಿ ಆಪ್ತರ ಮೇಲೆ. ಪ್ರಶ್ನೆ ಸತೀಶ್ ಬಗ್ಗೆ. ಹಾಗಾದರೆ ಇಡಿಯ ಬಲೆಯಲ್ಲಿ ಆಪ್ತರು ಕೇವಲ ಕೊಂಡಿಗಳೇ? ಅಂತಿಮ ಟಾರ್ಗೆಟ್ ಸತೀಶ್ ಜಾರಕಿಹೊಳಿ ಅವರೇ? ಉತ್ತರಿಸುವವರು ಯಾರು?