ದಾವಣಗೆರೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಪ್ರಜಾಸೇವಾ’ ಕಾರ್ಯಕ್ರಮದಡಿ ಶನಿವಾರ ನಡೆಯಬೇಕಿದ್ದ ಹೋಬಳಿ ಮಟ್ಟದ ಸಭೆ ಭದ್ರಾ ನಾಲೆಗೆ ನೀರು ಹರಿಸುವಂತೆ ರೈತರು ನಡೆಸಿದ ಪ್ರತಿಭಟನೆಯಿಂದಾಗಿ ರದ್ದಾದ ಘಟನೆ ನಡೆಯಿತು.
ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿಯಲ್ಲಿ ಶಾಸಕ ಬಿ.ಪಿ. ಹರೀಶ್ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು. ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಆಗಮಿಸಿದ್ದ ವೃದ್ಧರು, ಮಹಿಳೆಯರು, ಅಂಗವಿಕಲರು ಸೇರಿದಂತೆ ನೂರಾರು ಸಾರ್ವಜನಿಕರು ಸಭೆಗಾಗಿ ಕಾಯುತ್ತಿದ್ದರು.
ಈ ಮಧ್ಯೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರನ್ನು ಪಟ್ಟಣದ ಮುಖ್ಯ ವೃತ್ತದಲ್ಲಿಯೇ ರೈತರು ಹಾಗೂ ಶಾಸಕ ಬಿ.ಪಿ. ಹರೀಶ್ ಅಡ್ಡಗಟ್ಟಿ ಭದ್ರಾ ನಾಲೆಗೆ ನೀರು ಹರಿಸುವುದು ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತು ಪ್ರಶ್ನೆಗಳ ಸುರಿಮಳೆಗೈದರು.
ಜಿಲ್ಲಾಧಿಕಾರಿಗಳು ನೀಡಿದ ಉತ್ತರಕ್ಕೆ ತೃಪ್ತರಾಗದ ರೈತರು ಹಾಗೂ ಶಾಸಕರು, “ಜನರ ಹಿತ ಕಾಪಾಡುವ ಸಭೆ ನಡೆಸುವುದಾದರೆ ಮೊದಲು ಭದ್ರಾ ನಾಲೆಗೆ ನೀರು ಹರಿಸಿ, ಬಳಿಕ ಸಭೆ ನಡೆಸಿ” ಎಂದು ಪಟ್ಟುಹಿಡಿದರು.
“ದಾವಣಗೆರೆ ಜಿಲ್ಲೆಯ ಡಿಸಿಯೋ, ಶಾಮನೂರು ಕುಟುಂಬದ ಡಿಸಿಯೋ?”: ಜಿಲ್ಲಾಧಿಕಾರಿಗಳ ಉತ್ತರದಿಂದ ಅಸಮಾಧಾನಗೊಂಡ ಪ್ರತಿಭಟನಾಕಾರರು, “ನೀವು ದಾವಣಗೆರೆ ಜಿಲ್ಲೆಯ ಜಿಲ್ಲಾಧಿಕಾರಿಯೋ ಅಥವಾ ಶಾಮನೂರು ಕುಟುಂಬಕ್ಕೆ ಮಾತ್ರ ಜಿಲ್ಲಾಧಿಕಾರಿಯೋ?” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಜಿಲ್ಲಾಧಿಕಾರಿಗಳು ಅಲ್ಲಿಂದ ವಾಪಸ್ ತೆರಳಿದರು. ಬಳಿಕ ಸಭಾ ಸ್ಥಳದಲ್ಲಿ ಜಮಾಯಿಸಿದ ರೈತರು ಹಾಗೂ ಸಾರ್ವಜನಿಕರು ಜಿಲ್ಲಾಧಿಕಾರಿಗಳ ನಡೆ ಖಂಡಿಸಿ ಘೋಷಣೆಗಳನ್ನು ಕೂಗಿದರು. “ಭದ್ರತೆ ಇದ್ದರೂ ಸಭೆ ನಡೆಸುವ ಬದಲು ಶಾಸಕರಿಗೆ ಹೆದರಿ ಡಿಸಿ ವಾಪಸ್ ತೆರಳಿದ್ದಾರೆ” ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಭೆ ರದ್ದು: ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಪಡೆಯುವ ನಿರೀಕ್ಷೆಯಲ್ಲಿ ದೂರದ ಊರುಗಳಿಂದ ಬಂದಿದ್ದ ವೃದ್ಧರು, ಮಹಿಳೆಯರು, ಅಂಗವಿಕಲರು ಸೇರಿದಂತೆ ಸಾರ್ವಜನಿಕರಿಗೆ ಸಭೆ ರದ್ದಾದ ಕಾರಣ ನಿರಾಸೆಯಾಯಿತು. ಸಭೆಗಾಗಿ ಅಧಿಕಾರಿಗಳ ತಂಡವೂ ಸ್ಥಳದಲ್ಲಿ ಕಾಯುತ್ತ ನಿಂತಿತ್ತು. ಪೊಲೀಸರು ಸೂಕ್ತ ಭದ್ರತೆ ಒದಗಿಸಿದ್ದರು. ಸಭೆ ನಡೆಯದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ್ದ ಜನರು ಊಟ ಮಾಡಿ ವಾಪಸ್ ತೆರಳಿದರು.
ಮಳೆ ಇಲ್ಲ, ನಾಲೆಯಲ್ಲೂ ನೀರಿಲ್ಲ – ರೈತರ ಆಕ್ರೋಶ: “ಮೊದಲೇ ಮಳೆಯಿಲ್ಲ. ಜಲಾಶಯದ ನೀರು ಕೂಡ ಬಿಟ್ಟಿಲ್ಲ. ಹತ್ತಿಪ್ಪತ್ತು ವರ್ಷಗಳಿಂದ ಬೆಳೆಸಿಕೊಂಡ ತೋಟಗಳು ಒಣಗುತ್ತಿವೆ. ಮೆಕ್ಕೆಜೋಳ, ರಾಗಿ ಸೇರಿದಂತೆ ವಿವಿಧ ಬೆಳೆಗಳು ಒಣಗಿವೆ. ರೈತರ ಹಿತ ಕಾಪಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ” ಎಂದು ಕೊಕ್ಕನೂರು ರೈತ ಮುಖಂಡ ಅಭಿನಂದನ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಭದ್ರಾ ನಾಲೆಗೆ ನೀರು ಹರಿಸದಿರುವುದರಿಂದ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಜನರ ಸಮಸ್ಯೆ ಆಲಿಸಿ ಪರಿಹಾರ ನೀಡಬೇಕಿದ್ದ ‘ಪ್ರಜಾಸೇವಾ’ ಕಾರ್ಯಕ್ರಮವೇ ರೈತರ ಪ್ರತಿಭಟನೆಯಿಂದ ರದ್ದಾಗಿರುವುದು ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಅವರು ಆರೋಪಿಸಿದರು.
ತುಂಗಭದ್ರೆಗೆ ಆಸಕ್ತಿ; ಭದ್ರಾ ನಾಲೆಗೆ ಏಕೆ ನಿರ್ಲಕ್ಷ್ಯ?: “ಉಸ್ತುವಾರಿ ಸಚಿವರು ತುಂಗಭದ್ರಾ ನದಿಗೆ ನೀರು ಹರಿಸುವುದಕ್ಕೆ ತೋರಿಸುವ ಆಸಕ್ತಿಯನ್ನು ಭದ್ರಾ ಕಾಲುವೆಗೆ ನೀರು ಹರಿಸುವುದರಲ್ಲಿ ತೋರಿಸುತ್ತಿಲ್ಲ. ತುಂಗಭದ್ರಾ ನದಿಗೆ ನೀರು ಬಿಡುವುದು ತಮ್ಮ ಸಕ್ಕರೆ ಕಾರ್ಖಾನೆಗೆ ಅನುಕೂಲವಾಗುವ ಸ್ವಾರ್ಥದ ಕಾರಣಕ್ಕಾಗಿ ಎಂಬ ಅನುಮಾನ ರೈತರಲ್ಲಿ ಮೂಡಿದೆ.
ಮಳೆ ಇಲ್ಲ: ಭದ್ರಾ ಕಾಲುವೆಯಲ್ಲೂ ನೀರು ಹರಿಸಿಲ್ಲ. ರೈತರ ಹಿತ ಕಾಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ದೇವರಬೆಳಕೆರೆ ಪಿಕಪ್‌ಗೆ ನೀರು ಹರಿಸುವ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಅವೈಜ್ಞಾನಿಕ ಕ್ರಮ ಅನುಸರಿಸಿರುವುದು ಖಂಡನೀಯ. ಯಾರದೋ ಹಿತಾಸಕ್ತಿಗಾಗಿ ಉಳಿದ ರೈತರನ್ನು ಬಲಿ ಕೊಡಲಾಗುತ್ತಿದೆ” ಎಂದು ಶಾಸಕ ಬಿ.ಪಿ. ಹರೀಶ್ ಕಿಡಿಕಾರಿದರು.




















