SK Home Ad
Home ಸುದ್ದಿ ರಾಜ್ಯ ಕರ್ನಾಟಕ SIR: ‘6 ತಿಂಗಳ ನೋಟಿಸ್ ನೀಡಿ’ — ಪ್ರಕಾಶ್ ರಾಜ್ ಆಗ್ರಹ

ಕರ್ನಾಟಕ SIR: ‘6 ತಿಂಗಳ ನೋಟಿಸ್ ನೀಡಿ’ — ಪ್ರಕಾಶ್ ರಾಜ್ ಆಗ್ರಹ

0
68
ಕರ್ನಾಟಕ SIR: ‘ಆರು ತಿಂಗಳ ನೋಟಿಸ್ ನೀಡಿ’ — ಪ್ರಕಾಶ್ ರಾಜ್ ಆಗ್ರಹ

ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಪ್ರಕಾಶ್ ರಾಜ್ ಅಸಮಾಧಾನ; ‘ಇದು ಯಾವ ನಾಟಕ?’

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ನಟ ಪ್ರಕಾಶ್ ರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತದಾರರಿಗೆ ಸಾಕಷ್ಟು ಸಮಯ ಮತ್ತು ಅವಕಾಶ ನೀಡದೆ ಪರಿಶೀಲನಾ ನೋಟಿಸ್‌ಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಮುಂದಿನ ದಿನಗಳಲ್ಲಿ ನಾಗರಿಕ ಸಮಾಜದ ಭಾಗವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸುವುದಾಗಿ ಹೇಳಿದ್ದಾರೆ.

ಮಾದ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಪ್ರಕಾಶ್ ರಾಜ್, ಮತದಾರರಿಗೆ ಕನಿಷ್ಠ ಆರು ತಿಂಗಳ ಕಾಲ ನೋಟಿಸ್ ನೀಡಿ ತಮ್ಮ ದಾಖಲೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಹೇಳಿದ್ದಾರೆ. ಕೇವಲ ಒಂದು ಅಥವಾ ಎರಡು ದಿನಗಳ ಮುನ್ನ ನೋಟಿಸ್ ನೀಡುವುದರಿಂದ ಜನರಿಗೆ ಅಗತ್ಯ ದಾಖಲೆಗಳನ್ನು ಒದಗಿಸಲು ತೊಂದರೆಯಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

‘ನೋಟಿಸ್‌ನಲ್ಲಿ ಎರಡು ದಾಖಲೆಗಳನ್ನು ಕೇಳಲಾಗುತ್ತದೆ. ಆದರೆ ಕಚೇರಿಗೆ ಹೋದಾಗ ಇನ್ನೂ ಹೆಚ್ಚಿನ ದಾಖಲೆಗಳನ್ನು ಕೇಳಲಾಗುತ್ತಿದೆ’ ಎಂದು ಅವರು ಹೇಳಿದ್ದು, SIR ಪ್ರಕ್ರಿಯೆಯಲ್ಲಿ ಜನರು ಎದುರಿಸುತ್ತಿರುವ ತೊಂದರೆಗಳ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ.

ಡಿಕೆ ಶಿವಕುಮಾರ್ ಅವರ ತಾಯಿಯ ಬೂತ್ ಉದಾಹರಣೆ : ಕರ್ನಾಟಕದ ಕರಡು ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸ ಹಾಗೂ ಸಂಬಂಧಿತ ವಿವರಗಳಲ್ಲಿ ವ್ಯತ್ಯಾಸಗಳಿವೆ ಎಂದು ಹೇಳಿದ ಪ್ರಕಾಶ್ ರಾಜ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತಾಯಿಯ ಮತಗಟ್ಟೆಯನ್ನೇ ಉದಾಹರಣೆಯಾಗಿ ಉಲ್ಲೇಖಿಸಿದ್ದಾರೆ.

ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರಕಟವಾಗಿರುವ ವಿವರಗಳಲ್ಲಿ ಹೆಸರು ಹಾಗೂ ಪತಿಯ ಹೆಸರಿನಲ್ಲಿ ವ್ಯತ್ಯಾಸವಿದೆ ಎಂದು ಅವರು ಹೇಳಿದ್ದಾರೆ. ವಿಳಾಸದ ವಿವರಗಳಲ್ಲೂ ವ್ಯತ್ಯಾಸ ಕಂಡುಬರುತ್ತಿದೆ ಎಂದು ಆರೋಪಿಸಿರುವ ಅವರು, ಇಂತಹ ವ್ಯತ್ಯಾಸಗಳ ಬಗ್ಗೆ ಚುನಾವಣಾ ಪ್ರಕ್ರಿಯೆಯಲ್ಲಿ ಹೇಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದನ್ನು ಪ್ರಶ್ನಿಸಿದ್ದಾರೆ.

10 ಜಿಲ್ಲೆಗಳಲ್ಲಿ ಸಾಮಾಜಿಕ ಲೆಕ್ಕಪರಿಶೋಧನೆ : SIR ಕುರಿತು ತಮ್ಮ ವಿರೋಧ ಮುಂದುವರಿಸಿರುವ ಪ್ರಕಾಶ್ ರಾಜ್, ಸೆಪ್ಟೆಂಬರ್ 20ರಿಂದ 30ರವರೆಗೆ ಕರ್ನಾಟಕದ 10 ಜಿಲ್ಲೆಗಳಿಗೆ ತೆರಳಿ ವಿವಿಧ ಮತಗಟ್ಟೆಗಳಲ್ಲಿ ನಾಗರಿಕ ಸಮಾಜದೊಂದಿಗೆ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸುವುದಾಗಿ ಹೇಳಿದ್ದಾರೆ.

ಮತದಾರರ ಹೆಸರು ಕೈಬಿಟ್ಟಿರುವ ಪ್ರಕ್ರಿಯೆ, ನೋಟಿಸ್ ನೀಡುವ ವಿಧಾನ ಹಾಗೂ ಸ್ಥಳೀಯ ಮಟ್ಟದಲ್ಲಿ ಸಾರ್ವಜನಿಕರಿಗೆ ದೊರೆಯುತ್ತಿರುವ ಮಾಹಿತಿ ಸೇರಿದಂತೆ ವಿವಿಧ ಅಂಶಗಳನ್ನು ಪರಿಶೀಲಿಸುವ ಉದ್ದೇಶ ಇದಾಗಿದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ SIR ಪ್ರಕ್ರಿಯೆ ಇದೀಗ ಕರಡು ಪಟ್ಟಿಯಿಂದ ಅಂತಿಮ ಪಟ್ಟಿಯತ್ತ ಸಾಗುತ್ತಿದ್ದು, ಸಾರ್ವಜನಿಕರಿಂದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸುವ ಹಂತದಲ್ಲಿದೆ. ಚುನಾವಣಾ ಆಯೋಗದ ನಿಗದಿತ ವೇಳಾಪಟ್ಟಿಯ ಪ್ರಕಾರ ಕರ್ನಾಟಕದ ಅಂತಿಮ ಮತದಾರರ ಪಟ್ಟಿ ನವೆಂಬರ್ 22, 2026ರಂದು ಪ್ರಕಟವಾಗಲಿದೆ.

ಹೀಗಾಗಿ, SIR ಕುರಿತು ರಾಜಕೀಯ ಪಕ್ಷಗಳು, ನಾಗರಿಕ ಸಂಘಟನೆಗಳು ಮತ್ತು ಸಾರ್ವಜನಿಕರಿಂದ ಕೇಳಿಬರುತ್ತಿರುವ ಆಕ್ಷೇಪಣೆಗಳ ನಡುವೆ, ತಪ್ಪಾಗಿ ಹೆಸರು ಕೈಬಿಡದಂತೆ ಹಾಗೂ ಅರ್ಹ ಮತದಾರರಿಗೆ ತಮ್ಮ ಹಕ್ಕು ಮಂಡಿಸಲು ಸಾಕಷ್ಟು ಅವಕಾಶ ದೊರೆಯುವಂತೆ ಪ್ರಕ್ರಿಯೆ ಪಾರದರ್ಶಕವಾಗಿರಬೇಕೆಂಬ ಚರ್ಚೆ ಮುಂದುವರಿದಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.