SK Home Ad
Home ಸುದ್ದಿ ರಾಜ್ಯ ಜೈಲು ಗೋಡೆ ದಾಟಿದ ಮೊಬೈಲ್! ಪ್ರಜ್ವಲ್ ಕೈ ಸೇರಿದ್ದು ಹೇಗೆ?

ಜೈಲು ಗೋಡೆ ದಾಟಿದ ಮೊಬೈಲ್! ಪ್ರಜ್ವಲ್ ಕೈ ಸೇರಿದ್ದು ಹೇಗೆ?

0
36

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಸೆಲ್‌ನಲ್ಲಿ ಮೊಬೈಲ್ ಹಾಗೂ ಪೆನ್‌ಡ್ರೈವ್ ಪತ್ತೆಯಾದ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಜೈಲು ವಾರ್ಡನ್‌ವೊಬ್ಬರ ಪಾತ್ರದ ಬಗ್ಗೆಯೂ ಪೊಲೀಸರಿಗೆ ಅನುಮಾನ ಮೂಡಿದೆ.

ಡಿಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿ ತೌಸಿಫ್ ಎಂಬಾತ ಮೊಬೈಲ್‌ನ್ನು ಜೈಲು ವಾರ್ಡನ್‌ಗೆ ತಂದುಕೊಟ್ಟಿದ್ದ ಎನ್ನಲಾಗಿದ್ದು, ಅಲ್ಲಿಂದ ಅದು ಪ್ರಜ್ವಲ್ ರೇವಣ್ಣ ಅವರ ಕೈ ಸೇರಿರುವ ಸಾಧ್ಯತೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಜೈಲು ವಾರ್ಡನ್‌ರನ್ನು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

173 ಫೈಲ್‌ಗಳು ಪತ್ತೆ: ಪ್ರಜ್ವಲ್ ಬಳಸಿದ್ದ ಮೊಬೈಲ್‌ನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದ್ದು, ಅದರಲ್ಲಿದ್ದ 173 ಫೈಲ್‌ಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೊಬೈಲ್‌ನಲ್ಲಿ ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಸಿನಿಮಾಗಳು, ವೆಬ್‌ಸೀರಿಸ್‌ಗಳು ಸೇರಿದಂತೆ ಹಲವು ಬಗೆಯ ವಿಡಿಯೋಗಳು ಇದ್ದವು ಎನ್ನಲಾಗಿದೆ.

ಇನ್ನು ಮೊಬೈಲ್‌ನೊಂದಿಗೆ ಪತ್ತೆಯಾಗಿದ್ದ ಪೆನ್‌ಡ್ರೈವ್‌ನಲ್ಲಿ 100ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ ಎಂಬ ಮಾಹಿತಿ ಎಫ್‌ಎಸ್‌ಎಲ್ ವರದಿಯಿಂದ ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ.

ಜೈಲಿನಿಂದಲೇ ಮಹಿಳೆಯರಿಗೆ ಕರೆ?: ಜೈಲಿನಲ್ಲಿ ಪತ್ತೆಯಾದ ಮೊಬೈಲ್ ಬಳಸಿ ಪ್ರಜ್ವಲ್ ಕೆಲವರಿಗೆ ಕರೆ ಮಾಡಿರುವ ಮಾಹಿತಿಯೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಕೆಲವು ಮಹಿಳೆಯರಿಗೆ ವಾಟ್ಸಾಪ್ ಹಾಗೂ ವಿಡಿಯೋ ಕಾಲ್ ಮಾಡಿರುವ ಸಾಧ್ಯತೆ ಇದ್ದು, ಈ ಕರೆಗಳಿಗೆ ಸಂಬಂಧಿಸಿದ ವಿವರಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಮೊಬೈಲ್‌ನ ಕಾಲ್ ಡೀಟೇಲ್ಸ್, ಡಿಜಿಟಲ್ ಡೇಟಾ ಹಾಗೂ ಪೆನ್‌ಡ್ರೈವ್‌ನಲ್ಲಿರುವ ಮಾಹಿತಿಯನ್ನು ಪೊಲೀಸರು ವಿಶ್ಲೇಷಿಸುತ್ತಿದ್ದು, ಪ್ರಜ್ವಲ್ ಸಂಪರ್ಕಿಸಿದ್ದರೆನ್ನಲಾದ ಮಹಿಳೆಯರನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಮೊಬೈಲ್ ಪೂರೈಕೆ ಮಾಡಿದವರು ಯಾರು? ಜೈಲಿನೊಳಗೆ ತಲುಪಿದ್ದು ಹೇಗೆ? ಎಂಬ ಎರಡು ಪ್ರಮುಖ ಅಂಶಗಳ ಸುತ್ತ ಪೊಲೀಸರು ತನಿಖೆ ಕೇಂದ್ರೀಕರಿಸಿದ್ದು, ಪ್ರಕರಣದಲ್ಲಿ ಜೈಲು ಸಿಬ್ಬಂದಿಯ ಪಾತ್ರವಿದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ.