SK Home Ad
Home ಸುದ್ದಿ ರಾಜ್ಯ ಜಾರಕಿಹೊಳಿ ಬ್ರದರ್ಸ್‌ ಜತೆ ಶೆಟ್ಟರ್ ‘ಸೀಕ್ರೆಟ್’ ಮೀಟಿಂಗ್

ಜಾರಕಿಹೊಳಿ ಬ್ರದರ್ಸ್‌ ಜತೆ ಶೆಟ್ಟರ್ ‘ಸೀಕ್ರೆಟ್’ ಮೀಟಿಂಗ್

0
84

ಗೋಕಾಕ: ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರು ಶನಿವಾರ ಗೋಕಾಕ ನಗರಕ್ಕೆ ಭೇಟಿ ನೀಡಿದ್ದು ಶಾಸಕ ರಮೇಶ್ ಜಾರಕಿಹೊಳಿ ಹಾಗೂ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.

ವಿಧಾನ ಪರಿಷತ ಸದಸ್ಯ ಲಖನ್ ಜಾರಕಿಹೊಳಿ ಅವರ ನಿವಾಸಕ್ಕೆ ಭೇಟಿ ನೀಡಿರುವ ಸಂಸದರು, ಸುಮಾರು ಒಂದು ಗಂಟೆ ಚರ್ಚೆ ನಡೆಸಿದ್ದಾರೆ. ವಿಶೇಷವಾಗಿ ಪ್ರಸಕ್ತ ರಾಜಕೀಯ ವಿದ್ಯಮಾನ, ಗೋಕಾಕ ವಿಧಾನಸಭಾ ಕ್ಷೇತ್ರದ ರಾಜಕೀಯ ಬೆಳವಣಿಗೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಸಮಾಲೋಚನೆ ನಡೆಸಿದ್ದಾಗಿ ತಿಳಿದುಬಂದಿದೆ.

ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರೊಂದಿಗೆ ಜಗದೀಶ ಶೆಟ್ಟರ ಭೇಟಿ ಸಾಮಾನ್ಯ. ಆದರೆ ಪಕ್ಷೇತರ ಪರಿಷತ್ ಸದಸ್ಯ ಲಖನ ಜಾರಕಿಹೊಳಿ ಅವರನ್ನು ಅವರ ಸ್ವಗೃಹದಲ್ಲಿ ಭೇಟಿ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ.

ಲಖನ ಜಾರಕಿಹೊಳಿ ಪಕ್ಷೇತರ ಶಾಸಕರಾಗಿದ್ದರೂ ಕಾಂಗ್ರೆಸ್ ಪಕ್ಷದ ಮೇಲೆ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ ಸಿದ್ದರಾಮಯ್ಯನವರು ನಮ್ಮ ರಾಜಕೀಯ ಗುರುಗಳು ಎಂದು ಹೇಳುತ್ತಲೆ ಬಂದಿದ್ದಾರೆ. ಆದರೆ ಶನಿವಾರ ಲಖನ ನಿವಾಸಕ್ಕೆ ಶೆಟ್ಟರ ಭೇಟಿ ನೀಡಿದ್ದು ರಾಜಕೀಯ ವಲಯದಲ್ಲಿ ಮತ್ತಷ್ಟು ಕೂತೂಹಲ ಮೂಡಿದೆ.

ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಬೆಂಬಲಿಸುತ್ತ ಬಂದಿದ್ದ ಲಖನ್ ಜಾರಕಿಹೊಳಿ ಸದ್ಯ ತನ್ನ ಹಿರಿಯ ಸಹೋದರ ರಮೇಶ ಜಾರಕಿಹೊಳಿ ಜೊತೆ ಸಂಸದ ಜಗದೀಶ ಶೆಟ್ಟರ ಚರ್ಚೆ ನಡೆಸಿದ್ದು ಗೋಕಾಕನಲ್ಲಿ ಲಖನ್ ಜಾರಕಿಹೊಳಿ ಬಿಜೆಪಿ ಸೇರುವರೆ ಎಂಬ ಮಾತುಗಳು ಹರಿದಾಡತೊಡಗಿವೆ. ಜಗದೀಶ ಶೆಟ್ಟರ ಭೇಟಿಯ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ ನಿರ್ದೇಶಕ ಅಮರನಾಥ ಜಾರಕಿಹೊಳಿ ಸಹ ಉಪಸ್ಥಿತರಿದ್ದರು.