ಧಾರವಾಡ: ರಾಜ್ಯ ಮಾತ್ರವಲ್ಲದೇ ದೇಶದಲ್ಲಿ ಸಹ ಬಿಜೆಪಿಯಿಂದ ಟಾರ್ಗೆಟ್ ರಾಜಕಾರಣ ನಡೆಯುತ್ತಿದ್ದು, ಇದನ್ನು ಯಾಕೆ ಮಾಡಲಾಗುತ್ತಿದೆ ಎಂದು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಚಿವ ಯು.ಟಿ. ಖಾದರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, 100ರಲ್ಲಿ ಶೇ. 88ರಷ್ಟು ಕಾಂಗ್ರೆಸ್ ನಾಯಕರ ಮೇಲೆ ಟಾರ್ಗೆಟ್ ರಾಜಕೀಯ ಆಗುತ್ತಿದೆ. ಬಿಜೆಪಿ ನಾಯಕರ 100 ಕೇಸ್‌ನಲ್ಲಿ ಶೇ. 98ರಷ್ಟು ತಪ್ಪಿಲ್ಲ ಎಂದು ಬಿಡಲಾಗುತ್ತಿದೆ. ಕೇವಲ ಶೇ. 2ರಷ್ಟು ಕನ್ವಿಕ್ಟ್ ಆಗುತ್ತಿವೆ. ರಾಜ್ಯದ ಜನರು ಇದನ್ನು ಗಮನಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು, ಸಣ್ಣ ಸಮುದಾಯದಿಂದ ಬಂದು ದೊಡ್ಡ ಸ್ಥಾನಕ್ಕೇರಿದ ಸತೀಶ ಜಾರಕಿಹೊಳಿ ಅವರ ಮೇಲ್ಯಾಕೆ ಸಿಟ್ಟು ಎಂದು ಬೇಸರ ವ್ಯಕ್ತಪಡಿಸಿದರು.
ರಿಜೆಕ್ಟ್ ಅಡಕೆ ಬಳಸಿದರೆ ಕ್ರಮ: ತಂಬಾಕು ನಿಷೇಧ ಗೊಂದಲ ಏನಿಲ್ಲ. ಪಾನ್ ಮಸಾಲ, ನಿಕೋಟಿನ್ ಮಿಕ್ಸ್ ಬಂದ್ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಚೆನ್ನಾಗಿರುವ ಪಾನ್ ಮಸಾಲಗೆ ತೊಂದರೆ ಇಲ್ಲ. ಆದರೆ, ರಿಜೆಕ್ಟ್ ಆಗಿರುವ ಅಡಕೆ ಬಳಕೆ ಮಾಡಿದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಆಸ್ಪತ್ರೆಗಳಲ್ಲಿ ಗುಣಮಟ್ಟದ ಸೇವೆ ನೀಡಿ: ಸರ್ಕಾರಿ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡಿ, ರೋಗಿಗಳಿಗೆ ಧೈರ್ಯ ಹಾಗೂ ನಂಬಿಕೆ ಮೂಡುವ ವಾತಾವರಣ ನಿರ್ಮಿಸಿ ಎಂದು ಸಚಿವರು ಧಾರವಾಡದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೇಳಿದರು.
ವೈದ್ಯರ ವರ್ಗಾವಣೆ ಸಮಾಲೋಚನೆಯಲ್ಲಿ ಪತಿ-ಪತ್ನಿ ಒಂದೇ ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಅನುಕೂಲವಾಗುವಂತೆ ಕೆಲವು ಬದಲಾವಣೆ ತರಲಾಗುವುದು. ಉತ್ತಮ ಸೇವೆ ಸಲ್ಲಿಸಿರುವ ವೈದ್ಯರಿಗೆ ಅದೇ ಸ್ಥಳದಲ್ಲಿ ಮುಂದುವರಿಯಲು ಅವಕಾಶ ನೀಡುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು. ಗುತ್ತಿಗೆ ಆಧಾರದ ಮೇಲೆ 3 ರಿಂದ 5 ವರ್ಷ ಸೇವೆ ಸಲ್ಲಿಸಿರುವ ವೈದ್ಯರನ್ನು ಕಾಯಂಗೊಳಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಭೆ ನಡೆಸಿದ ಸಚಿವರು, ಶಿಕ್ಷಕರಿಗೆ ಶೀಘ್ರದಲ್ಲೇ 15 ದಿನಗಳ ಕಠಿಣ ತರಬೇತಿ ಆಯೋಜಿಸಲಾಗುವುದು. ಪ್ರತಿಯೊಂದು ಶಾಲೆಯಲ್ಲೂ ಫುಟ್‌ಬಾಲ್, ಕ್ರಿಕೆಟ್, ಹಾಕಿ, ಕಬಡ್ಡಿ, ಖೋ-ಖೋ ಮುಂತಾದ ತಂಡಗಳನ್ನು ಕಡ್ಡಾಯವಾಗಿ ರಚಿಸಬೇಕು ಎಂದು ಖಡಕ್ ಸೂಚನೆ ನೀಡಿದರು.




















