SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಹೊನ್ನಾಳಿಯಲ್ಲಿ ಗೊಂದಲ: ಪ್ರಜಾಸೇವೆಗೆ ಬಂದರು – ಬರಿಗೈಲಿ ಮರಳಿದರು! – ಜನರ ಅಲೆದಾಟಕ್ಕೆ ಶಾಸಕರ ಸ್ಪಷ್ಟನೆ

ಹೊನ್ನಾಳಿಯಲ್ಲಿ ಗೊಂದಲ: ಪ್ರಜಾಸೇವೆಗೆ ಬಂದರು – ಬರಿಗೈಲಿ ಮರಳಿದರು! – ಜನರ ಅಲೆದಾಟಕ್ಕೆ ಶಾಸಕರ ಸ್ಪಷ್ಟನೆ

0
88
‘ಪ್ರಜಾಸೇವೆ’ ಗೊಂದಲ; ಸಾಸ್ವೆಹಳ್ಳಿಯಲ್ಲಿ 250ಕ್ಕೂ ಹೆಚ್ಚು ಜನರ ಪರದಾಟ

ಹೊನ್ನಾಳಿ ತಾಲೂಕಿನಲ್ಲಿ ಗೊಂದಲಕ್ಕೆ ಸಿಲುಕಿದ ಸರ್ಕಾರದ ‘ಜನರ ಬಳಿಗೆ ಸರ್ಕಾರ’ ಕಾರ್ಯಕ್ರಮ; ೨೫೦ಕ್ಕೂ ಹೆಚ್ಚು ಜನರ ಅಲೆದಾಟ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ

ಸಾಸ್ವೆಹಳ್ಳಿ (ದಾವಣಗೆರೆ) : ಸರ್ಕಾರದ ಸೌಲಭ್ಯಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಆರಂಭಿಸಿರುವ ‘ಪ್ರಜಾಸೇವಾ’ ಕಾರ್ಯಕ್ರಮವೇ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರಿಗೆ ಪರದಾಟದ ಕಾರ್ಯಕ್ರಮವಾಗಿ ಮಾರ್ಪಟ್ಟ ಘಟನೆ ಶನಿವಾರ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿಯಲ್ಲಿ ನಡೆದಿದೆ.

ಹೊನ್ನಾಳಿ ತಾಲೂಕಿನಲ್ಲಿ ಮೂರನೇ ಶನಿವಾರ ಪ್ರಜಾಸೇವಾ ಕಾರ್ಯಕ್ರಮ ನಡೆಯಲಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸುಮಾರು ೨೫೦ರಿಂದ ೩೦೦ಕ್ಕೂ ಹೆಚ್ಚು ಮಹಿಳೆಯರು, ಪುರುಷರು ಹಾಗೂ ವೃದ್ಧರು ಬೆಳಗ್ಗೆಯಿಂದಲೇ ಸಮಸ್ಯೆಗಳ ಅರ್ಜಿ ಹಿಡಿದು ಸಾಸ್ವೆಹಳ್ಳಿಯ ಶ್ರೀಆಂಜನೇಯಸ್ವಾಮಿ ಸಮುದಾಯ ಭವನದ ಬಳಿ ಜಮಾಯಿಸಿದ್ದರು. ಕೆಲವರು ಆಟೋ ಮಾಡಿಕೊಂಡು ದೂರದ ಊರುಗಳಿಂದ ಬಂದಿದ್ದರೆ, ಎರಡು ತಿಂಗಳ ಹಸುಗೂಸನ್ನು ಎತ್ತಿಕೊಂಡು ಬಂದ ಬಾಣಂತಿಯೂ ಕಾರ್ಯಕ್ರಮದ ನಿರೀಕ್ಷೆಯಲ್ಲಿ ನಿಂತಿದ್ದರು.

ಆದರೆ ಕಾರ್ಯಕ್ರಮದ ಸ್ಥಳ, ಸಮಯ ಹಾಗೂ ಮುಂದಿನ ಕ್ರಮದ ಬಗ್ಗೆ ಸ್ಪಷ್ಟ ಮಾಹಿತಿ ನೀಡುವ ಅಧಿಕಾರಿಗಳು ಅಥವಾ ಸಿಬ್ಬಂದಿ ಸ್ಥಳದಲ್ಲಿ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಜನರಲ್ಲಿ ಗೊಂದಲ ಉಂಟಾಯಿತು ಎನ್ನಲಾಗಿದೆ. ಕಾರ್ಯಕ್ರಮ ಎಲ್ಲಿ ನಡೆಯುತ್ತದೆ ಎಂಬುದೇ ತಿಳಿಯದೆ ಜನರು ಕಂಡ ಕಂಡವರನ್ನು ವಿಚಾರಿಸುತ್ತಾ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಯಿತು.

ಅರ್ಜಿ ಹಿಡಿದು ಬಂದರು – ಅಧಿಕಾರಿಗಳ ಸುಳಿವೇ ಇಲ್ಲ! : ಬೆಳಗ್ಗೆ 9 ಗಂಟೆಯಿಂದಲೇ ಜನರು ಅಧಿಕಾರಿಗಳು ಹಾಗೂ ಶಾಸಕರಿಗಾಗಿ ಕಾಯುತ್ತಿದ್ದರು. ಆದರೆ ಗಂಟೆಗಳು ಕಳೆದರೂ ಕಾರ್ಯಕ್ರಮದ ಬಗ್ಗೆ ಸ್ಪಷ್ಟ ಮಾಹಿತಿ ನೀಡುವವರೇ ಇರಲಿಲ್ಲ. ಸಮಸ್ಯೆಗಳ ಅರ್ಜಿ ಹಿಡಿದು ಬಂದಿದ್ದ ಮಹಿಳೆಯರು, ವೃದ್ಧರು ಬಿಸಿಲಿನಲ್ಲಿ ನಿಂತು ಪರದಾಡಬೇಕಾಯಿತು.

‘ನಮಗೆ ಯಾಕೆ ಹೇಳಬೇಕಾಗಿತ್ತು? : ಒಂದು ದಿನದ ಕೆಲಸ ಬಿಟ್ಟು, ಮನೆ ಬಿಟ್ಟು ಬಂದಿದ್ದೇವೆ. ಕಾರ್ಯಕ್ರಮ ನಡೆಯುತ್ತದೆ ಎಂದು ನಂಬಿ ಬಂದರೆ ಇಲ್ಲಿ ಯಾರೂ ಇಲ್ಲ. ನಾವು ಬಂದಿದ್ದು ತಪ್ಪಾ, ಮಾಹಿತಿ ನೀಡಿದವರೇ ತಪ್ಪಾ?’ ಎಂದು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ವಿಶೇಷವಾಗಿ ಬಾಣಂತಿಯರು, ವೃದ್ಧರು ಹಾಗೂ ದೂರದ ಗ್ರಾಮಗಳಿಂದ ಬಂದಿದ್ದ ಜನರ ಸ್ಥಿತಿ ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯವನ್ನು ಎತ್ತಿತೋರಿಸುವಂತಿತ್ತು.

ದಾರಿ ತಪ್ಪಿಸಿದವರು ಯಾರು? : ಹೊನ್ನಾಳಿಯಲ್ಲಿ ಕಾರ್ಯಕ್ರಮ ನಡೆಯುತ್ತದೆ ಎಂಬ ನಿರೀಕ್ಷೆಯಲ್ಲಿ ಬಂದಿದ್ದ ಕೆಲವರಿಗೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ‘ಕಾರ್ಯಕ್ರಮ ಸಾಸ್ವೆಹಳ್ಳಿಯಲ್ಲಿ ನಡೆಯುತ್ತದೆ’ ಎಂದು ತಿಳಿಸಿದ್ದರಿಂದಲೇ ಜನರು ಸಾಸ್ವೆಹಳ್ಳಿಗೆ ಆಗಮಿಸಿದ್ದರು ಎನ್ನಲಾಗಿದೆ.
ಆದರೆ ಸಾಸ್ವೆಹಳ್ಳಿಗೆ ಬಂದ ಬಳಿಕ ಕಾರ್ಯಕ್ರಮವೇ ಇಲ್ಲದಿರುವುದು ಗೊತ್ತಾಗಿ ಜನರು ದಿಕ್ಕು ತೋಚದೆ ಪರದಾಡಿದರು. ಸರ್ಕಾರದ ಕಾರ್ಯಕ್ರಮದ ದಿನಾಂಕ, ಸ್ಥಳ ಹಾಗೂ ಸಮಯದ ಕುರಿತು ಜನರಿಗೆ ಸ್ಪಷ್ಟ ಮಾಹಿತಿ ನೀಡುವ ವ್ಯವಸ್ಥೆಯೇ ಇರಲಿಲ್ಲ ಎಂಬ ಆರೋಪ ಕೇಳಿಬಂದಿತು.

‘ಒಂದು ಶನಿವಾರದ ಪ್ರಜಾಸೇವೆ ಸಾಕೇ?’ : ಘಟನೆಯ ಬಗ್ಗೆ ಸ್ಥಳದಲ್ಲಿದ್ದ ಕೆಲ ಮಹಿಳೆಯರು ಸರ್ಕಾರದ ಕಾರ್ಯಕ್ರಮದ ಬಗ್ಗೆ ವ್ಯಂಗ್ಯವಾಗಿ ಮಾತನಾಡಿಕೊಂಡಿದ್ದು ಗಮನ ಸೆಳೆಯಿತು. ‘ಬಿಜೆಪಿಯವರು ಬಳ್ಳಾರಿ ಪಾದಯಾತ್ರೆ ಮಾಡುತ್ತಿದ್ದಾರಲ್ಲ. ಜನರ ಗಮನವನ್ನು ಬೇರೆಡೆ ಸೆಳೆಯಲು ಒಂದು ಶನಿವಾರ ಪ್ರಜಾಸೇವಾ ಕಾರ್ಯಕ್ರಮ ಮಾಡಿದರು. ಉಳಿದದ್ದನ್ನು ಮರೆತುಬಿಟ್ಟರೇ? ಬಳ್ಳಾರಿ ಪಾದಯಾತ್ರೆ ಮುಗಿದಂತೆ ಪ್ರಜಾಸೇವಾ ಕಾರ್ಯಕ್ರಮವೂ ಮುಗಿಯಿತೇ?’ ಎಂದು ಮಹಿಳೆಯರು ಪರಸ್ಪರ ಮಾತನಾಡಿಕೊಳ್ಳುವುದು ಕಂಡು ಬಂತು.

ಮನೆ ಬಾಗಿಲಿಗೆ ಸರ್ಕಾರ ಎಂದವರು, ಜನರನ್ನೇ ಬಾಗಿಲಲ್ಲಿ ನಿಲ್ಲಿಸಿದರೇ?: ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ, ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವ ಉದ್ದೇಶದ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಸ್ಥಳ, ದಿನಾಂಕ ಮತ್ತು ಸಮಯದ ಬಗ್ಗೆ ಜನರಿಗೆ ಸಮರ್ಪಕ ಮಾಹಿತಿ ನೀಡದಿರುವುದು ಆಡಳಿತದ ಗಂಭೀರ ವೈಫಲ್ಯ ಎಂಬ ಆಕ್ರೋಶ ವ್ಯಕ್ತವಾಗಿದೆ.

ಪ್ರಜಾಸೇವಾ ಕಾರ್ಯಕ್ರಮಕ್ಕೆಂದು ಬೆಳಗ್ಗೆಯೇ ಮನೆಗಳಿಂದ ಹೊರಟು ಬಂದ ನೂರಾರು ಜನರು ಸಮಸ್ಯೆಗಳ ಅರ್ಜಿ ಹಿಡಿದು ಗಂಟೆಗಟ್ಟಲೆ ಕಾದು, ಕೊನೆಗೆ ಯಾವುದೇ ಅಧಿಕಾರಿಯನ್ನು ಭೇಟಿಯಾಗದೆ ಬರಿಗೈಲಿ ಮನೆಗೆ ಮರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.


‘ಜನರ ಬಳಿಗೆ ಸರ್ಕಾರ’ ಎಂಬ ಘೋಷಣೆ ಕೇವಲ ಪ್ರಚಾರಕ್ಕೆ ಸೀಮಿತವಾಗದೆ, ನಿಜವಾಗಿಯೂ ಜನರ ಸಮಸ್ಯೆಗಳನ್ನು ಆಲಿಸುವ ವ್ಯವಸ್ಥೆಯಾಗಬೇಕು. ಕಾರ್ಯಕ್ರಮ ಮುಂದೂಡಿದ್ದರೆ ಅದರ ಮಾಹಿತಿಯನ್ನು ಮುಂಚಿತವಾಗಿ ಗ್ರಾಮ ಮಟ್ಟದವರೆಗೆ ತಲುಪಿಸಬೇಕಿತ್ತು. ಇಂತಹ ಗೊಂದಲ ಮರುಕಳಿಸದಂತೆ ತಾಲೂಕು ಆಡಳಿತ ಜವಾಬ್ದಾರಿ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶಾಸಕರ ಸ್ಪಷ್ಟನೆ ಏನು?..

‘ಕಾರ್ಯಕ್ರಮ ಪೋಸ್ಟ್ಪೋನ್ ಆಗಿದೆ. ಮುಂದಿನ ದಿನಾಂಕವನ್ನು ಸಾರ್ವಜನಿಕರಿಗೆ ತಿಳಿಸುತ್ತೇವೆ. ಹೊನ್ನಾಳಿ ನಗರದವರು ಸಾಸ್ವೆಹಳ್ಳಿ ಗ್ರಾಮಕ್ಕೆ ಬರುವ ಪ್ರಮೇಯವೇ ಇರಲಿಲ್ಲ. ಅವರು ಯಾಕೆ ಬಂದಿದ್ದಾರೋ, ಅವರಿಗೆ ಯಾರು ಮಾಹಿತಿ ನೀಡಿದ್ದಾರೋ ಗೊತ್ತಿಲ್ಲ’ ಎಂದು ಸಂಯುಕ್ತ ಕರ್ನಾಟಕ್ಕೆ ಶಾಸಕ ಡಿ.ಜಿ. ಶಾಂತನಗೌಡ ತಿಳಿಸಿದ್ದಾರೆ.