SK Home Ad
Home ನಮ್ಮ ಜಿಲ್ಲೆ ರಾಯಚೂರು ಗಣೇಶ ಮೂರ್ತಿ ತರಲು ಹೋದಾಗ ಅವಘಡ: ಯುವಕ ಸಾವು

ಗಣೇಶ ಮೂರ್ತಿ ತರಲು ಹೋದಾಗ ಅವಘಡ: ಯುವಕ ಸಾವು

0
96

ರಾಯಚೂರು: ಸಿರವಾರ ಸಮೀಪದ ಅತ್ತನೂರು ಗ್ರಾಮದ ಬಳಿ ಗಣೇಶ ಮೂರ್ತಿಯನ್ನು ತರುವ ವೇಳೆ ಮೂರ್ತಿಗೆ ವಿದ್ಯುತ್ ತಂತಿ ತಗುಲಿ ಮೂರ್ತಿ ಬಿದ್ದ ಪರಿಣಾಮವಾಗಿ ಸಿರವಾರ ಪಟ್ಟಣದ ಯುವಕ ಪ್ರಾಣ ಕಳೆದುಕೊಂಡಿರುವ ಘಟನೆ ಶುಕ್ರವಾರ ಬೆಳಗಿನ ಜಾವ ಜರುಗಿದೆ.

ಮೃತ ಯುವಕನನ್ನು ಸಿರವಾರ ಪಟ್ಟಣದ ವಿದ್ಯಾನಗರ ನಿವಾಸಿ ಪ್ರೇಮ ಸುಂದರ ಕೆಂಪು (26) ಎಂದು ಗುರುತಿಸಲಾಗಿದೆ. ಗಣೇಶೋತ್ಸವಕ್ಕಾಗಿ ಸಿದ್ಧತೆ ನಡೆಸುತ್ತಿದ್ದ ಪಟ್ಟಣದ ಯುವಕರ ಬಳಗದಲ್ಲಿ ಈ ಸಾವಿನಿಂದ ಶೋಕದ ವಾತಾವರಣ ಆವರಿಸಿದೆ.

ಹೈದರಾಬಾದ್‌ನಿಂದ ಗಣೇಶನ ಮೂರ್ತಿಯನ್ನು ವಾಹನದಲ್ಲಿ ಸಿರವಾರಕ್ಕೆ ಸಾಗಿಸಲಾಗುತ್ತಿತ್ತು. ಅತ್ತನೂರು ಗ್ರಾಮ ತಲುಪುತ್ತಿದ್ದಂತೆ, ರಸ್ತೆಯ ಮೇಲ್ಭಾಗದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಗೆ ವಾಹನದ ಮೇಲಿದ್ದ ಗಣೇಶ ವಿಗ್ರಹ ಸಿಲುಕಿಕೊಂಡಿತು. ಇದರ ರಭಸಕ್ಕೆ ವಿದ್ಯುತ್ ತಂತಿ ತುಂಡಾಗಿ, ಬೃಹತ್ ಗಣೇಶ ಮೂರ್ತಿ ವಾಹನದಲ್ಲಿದ್ದ ಪ್ರೇಮ ಸುಂದರ ಅವರ ಮೇಲೆ ಬಿದ್ದಿತು. ಗಂಭೀರವಾಗಿ ಗಾಯಗೊಂಡ ಅವರನ್ನು ಸ್ನೇಹಿತರು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರೂ, ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದರು.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸಿರವಾರ ಸಿಪಿಐ ಶಶಿಕಾಂತ ಎಂ. ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.