ಸಕ್ಕರೆಯ ಏರಿಕೆಯಾಗುತ್ತಿರುವ ಬೆಲೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ದೇಶಾದ್ಯಂತ ಸಕ್ಕರೆಯ ಸರಾಸರಿ ಚಿಲ್ಲರೆ ಬೆಲೆ ಕಳೆದ ಒಂದು ವಾರದಲ್ಲಿ ಸುಮಾರು ಶೇ.4ರಷ್ಟು ಇಳಿಕೆಯಾಗಿದೆ. ಸಗಟು ಮಾರುಕಟ್ಟೆಯಲ್ಲಿಯೂ ಸಕ್ಕರೆ ದರದಲ್ಲಿ ಇಳಿಕೆ ಕಂಡುಬಂದಿದೆ. ಆದರೆ ಅಂಗಡಿಗಳಲ್ಲಿ ಸಕ್ಕರೆ ಬೆಲೆ ಇಳಿಕೆ ಬರಲು ಇನ್ನೂ ಕೆಲವು ದಿನಗಳು ಬೇಕಾಗಬಹುದು.
ಕಳೆದ ಒಂದು ವಾರದಲ್ಲಿ ಸಕ್ಕರೆಯ ಚಿಲ್ಲರೆ ಬೆಲೆ ಶೇ.3.85ರಷ್ಟು ಕಡಿಮೆಯಾಗಿದ್ದು, ಪ್ರತಿ ಕೆ.ಜಿಗೆ ₹62.57ಕ್ಕೆ ಬಂದಿದೆ. ಒಂದು ವಾರದ ಹಿಂದೆ ಇದೇ ಬೆಲೆ ₹65.08ರಷ್ಟಿತ್ತು. ಆದರೆ ಇತ್ತೀಚಿನ ಇಳಿಕೆಯ ನಡುವೆಯೂ ಸಕ್ಕರೆ ಇನ್ನೂ ದುಬಾರಿಯಾಗಿದೆ. ಕಳೆದ ತಿಂಗಳ ₹49.33ರ ದರಕ್ಕೆ ಹೋಲಿಸಿದರೆ ಈಗಲೂ ಸುಮಾರು ಶೇ.27ರಷ್ಟು ಹೆಚ್ಚಿನ ಬೆಲೆಯಲ್ಲಿದೆ.
ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ 10 ಲಕ್ಷ ಟನ್ ಸಕ್ಕರೆ ಆಮದು ಮಾಡಲು ಅನುಮತಿ ನೀಡಿರುವುದು ಪ್ರಮುಖ ಕ್ರಮವಾಗಿದೆ. ಜೊತೆಗೆ ಸಗಟು ಖರೀದಿದಾರರು ಮತ್ತು ವ್ಯಾಪಾರಿಗಳು ಹೊಂದಿರಬಹುದಾದ ಸಕ್ಕರೆ ದಾಸ್ತಾನು ಕುರಿತ ನಿಯಮಗಳನ್ನು ಕೂಡ ಬಿಗಿಗೊಳಿಸಲಾಗಿದೆ.
ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಸೆಪ್ಟೆಂಬರ್ 2ರಂದು ಸಕ್ಕರೆಯ ಸರಾಸರಿ ಸಗಟು ಬೆಲೆ ಪ್ರತಿ ಕೆ.ಜಿಗೆ ₹57.62ರಷ್ಟಿತ್ತು. ಒಂದು ವಾರದ ಹಿಂದೆ ಇದು ₹60.39ರಷ್ಟಿತ್ತು. ಅಂದರೆ ಸಗಟು ದರದಲ್ಲಿ ಪ್ರತಿ ಕೆ.ಜಿಗೆ ₹2.77ರಷ್ಟು ಇಳಿಕೆಯಾಗಿದೆ.
ಸಗಟು ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗಿದ್ದರೂ ಅದರ ಸಂಪೂರ್ಣ ಲಾಭ ತಕ್ಷಣ ಗ್ರಾಹಕರಿಗೆ ಸಿಗುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಅಂಗಡಿಗಳಲ್ಲಿರುವ ಹಳೆಯ ದಾಸ್ತಾನು. ಹಲವು ವ್ಯಾಪಾರಿಗಳು ಸಕ್ಕರೆಯನ್ನು ಈಗಾಗಲೇ ಹೆಚ್ಚಿನ ಬೆಲೆಗೆ ಖರೀದಿಸಿರುವುದರಿಂದ, ಅದನ್ನು ತಕ್ಷಣ ಕಡಿಮೆ ಬೆಲೆಗೆ ಮಾರಾಟ ಮಾಡಿದರೆ ನಷ್ಟವಾಗುವ ಸಾಧ್ಯತೆಯಿದೆ.
ವ್ಯಾಪಾರಿಗಳ ಪ್ರಕಾರ, ಹೊಸ ಮತ್ತು ಕಡಿಮೆ ಬೆಲೆಯ ಸಕ್ಕರೆ ದಾಸ್ತಾನು ಅಂಗಡಿಗಳಿಗೆ ತಲುಪಿದ ಬಳಿಕ ಚಿಲ್ಲರೆ ಬೆಲೆಯಲ್ಲಿ ದೊಡ್ಡ ಪ್ರಮಾಣದ ಇಳಿಕೆ ಕಾಣಿಸಿಕೊಳ್ಳಬಹುದು. ಇದಕ್ಕೆ ಕನಿಷ್ಠ 10 ದಿನಗಳವರೆಗೆ ಸಮಯ ಬೇಕಾಗಬಹುದು.
2025-26 ಮಾರುಕಟ್ಟೆ ವರ್ಷದಲ್ಲಿ ದೇಶದ ಸಕ್ಕರೆ ಉತ್ಪಾದನೆಯ ಅಂದಾಜನ್ನು 343 ಲಕ್ಷ ಟನ್‌ನಿಂದ 306 ಲಕ್ಷ ಟನ್‌ಗೆ ಇಳಿಸಲಾಗಿದೆ. ಆದರೂ ದೇಶದ ವಾರ್ಷಿಕ ಸಕ್ಕರೆ ಬಳಕೆ ಸುಮಾರು 280-285 ಲಕ್ಷ ಟನ್‌ಗಳಷ್ಟಿರುವುದರಿಂದ, ಸದ್ಯಕ್ಕೆ ದೊಡ್ಡ ಮಟ್ಟದ ಕೊರತೆಯ ಆತಂಕವಿಲ್ಲ ಸರ್ಕಾರ ಅಂದಾಜು ಮಾಡಿದೆ.
ಸಕ್ಕರೆ ದರದಲ್ಲಿ ಇತ್ತೀಚಿನ ಇಳಿಕೆ ಗ್ರಾಹಕರಿಗೆ ಕೊಂಚ ನೆಮ್ಮದಿ ತಂದಿದೆ. ಆದರೆ ಅಂಗಡಿಗಳಲ್ಲಿ ಕಡಿಮೆ ಬೆಲೆಯ ಸಕ್ಕರೆ ದಾಸ್ತಾನು ತಲುಪಿದ ಬಳಿಕವೇ ಇದರ ಸಂಪೂರ್ಣ ಲಾಭ ಸಿಗುವ ನಿರೀಕ್ಷೆಯಿದೆ. ಹೀಗಾಗಿ ಮುಂದಿನ 10 ದಿನಗಳಲ್ಲಿ ಸಕ್ಕರೆ ದರ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.
-ಸಾರಿಕಾ ಪೂಜಾರಿ





















