ಭಾರತೀಯ ಕ್ರಿಕೆಟ್‌ನ ಹೊಸ ಸಂಚಲನ 15 ವರ್ಷದ ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐ ಅತ್ಯಂತ ಮಹತ್ವದ ಹೇಳಿಕೆ ನೀಡಿದೆ. ಇತ್ತೀಚೆಗೆ ನಡೆದ ಬಿಸಿಸಿಐ ಪರಾಮರ್ಶನಾ ಸಭೆಯಲ್ಲಿ, ವೈಭವ್ ಅವರನ್ನು ಮುಂದಿನ ದಿನಗಳಲ್ಲಿ ಸಚಿನ್ ತೆಂಡೂಲ್ಕರ್ ಅವರಂತೆ ಸುದೀರ್ಘ ಕಾಲ ದೇಶಕ್ಕೆ ಸೇವೆ ಸಲ್ಲಿಸುವ ಆಟಗಾರನನ್ನಾಗಿ ರೂಪಿಸಲು ಮಂಡಳಿ ನಿರ್ಧರಿಸಿದೆ.
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾತನಾಡಿ, “ವೈಭವ್ ಕೇವಲ ಒಂದು ಸರಣಿ ಅಥವಾ ಒಂದು ವರ್ಷದ ಅದ್ಭುತವಾಗಿ (One year wonder) ಉಳಿಯಬಾರದು ಎಂಬುದು ನಮ್ಮ ಆಶಯ. ಅವರು ಸಚಿನ್ ತೆಂಡೂಲ್ಕರ್ ಅಥವಾ ಇತರ ದಂತಕಥೆಗಳಂತೆ ಭಾರತಕ್ಕೆ ಸುದೀರ್ಘ ಕಾಲ ಆಡಬೇಕು ಎಂದು ನಾವು ಬಯಸುತ್ತೇವೆ. ನಾವು ವೈಭವ್ ಅವರನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಮತ್ತು ಅವರ ಪ್ರತಿಯೊಂದು ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ,” ಎಂದು ತಿಳಿಸಿದ್ದಾರೆ.
ಮುಂಬೈನಲ್ಲಿ ನಡೆದ ಈ ಸಭೆಯಲ್ಲಿ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್, ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್, ನಾಯಕ ಶುಬ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಪಾಲ್ಗೊಂಡಿದ್ದರು. ಯುವ ಪ್ರತಿಭೆಗಳನ್ನು ಅಕಾಲಿಕವಾಗಿ ಕಳೆದುಕೊಳ್ಳದಂತೆ ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.
ವೈಭವ್ ಸೂರ್ಯವಂಶಿ ಅವರ ಸಾಧನೆಗಳು ಅಲ್ಪಾವಧಿಯಲ್ಲೇ ಗಗನಕ್ಕೇರಿವೆ. ಕೇವಲ 15 ವರ್ಷದ ಹರೆಯದಲ್ಲೇ ಅವರು ದುಲೀಪ್ ಟ್ರೋಫಿ ಇತಿಹಾಸದಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಅಲ್ಲದೆ, ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಬ್ಬರಿಸಿದ್ದ ಅವರು, 776 ರನ್ ಗಳಿಸಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದರು.
237.30ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದ ಅವರು 72 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು. ಅಂಡರ್-19 ವಿಶ್ವಕಪ್‌ನಲ್ಲೂ ಮಿಂಚಿದ್ದ ಈ ಹುಡುಗನನ್ನು ಮುಂದಿನ ಸೂಪರ್ ಸ್ಟಾರ್ ಎಂದು ಬಿಸಿಸಿಐ ಗುರುತಿಸಿದೆ. ಈ ಕಾರಣಕ್ಕಾಗಿಯೇ ಅವರಿಗೆ ತೆಂಡೂಲ್ಕರ್ ಅವರ ಹಾದಿಯಲ್ಲಿ ನಡೆಯುವಂತೆ ಬಿಸಿಸಿಐ ಕಿವಿಮಾತು ಹೇಳಿದೆ.






















